

ತುಮಕೂರು: ಪತ್ರಕರ್ತರ ಆರೋಗ್ಯ ವಿಮೆ ಜಾರಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಪತ್ರಕರ್ತರ ಕಲ್ಯಾಣಕ್ಕೆ ಬಜೆಟ್ನಲ್ಲಿ 10 ಕೋಟಿ ರೂ., ಮೀಸಲಿಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ಸಿದ್ದಾರ್ಥ ತ್ರಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 2ದಿನಗಳ ರಾಜ್ಯಮಟ್ಟದ 39ನೇ ರಾಜ್ಯಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಬಜೆಟ್ನಲ್ಲಿ ಘೋಷಿಸಿದಂತೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಯೋಜನೆ ಜಾರಿ ಮಾಡಿದ್ದು ಇನ್ನೂ ಕೆಲವೇ ದಿನದಲ್ಲಿ ಬಸ್ ಪಾಸ್ ನಿಮ್ಮ ಕೈ ಸೇರಲಿವೆ ಎಂದು ತಿಳಿಸಿದರು.
ಪತ್ರಕರ್ತರ ಮಾಸಾಶನವನ್ನೂ 3 ಸಾವಿರದಿಂದ 12 ಸಾವಿರಕ್ಕೆ ನನ್ನ ಅವಧಿಯಲ್ಲೇ ಹೆಚ್ಚಿಸಲಾಗಿದೆ. ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿರುವುದು ನಿಮ್ಮನ್ನು ಓಲೈಕ ಮಾಡಲಿಕ್ಕಲ್ಲ. ನೀವು ಸಮಾಜದ ಪರವಾಗಿರಬೇಕು. ಯಾವುದೇ ಒಂದು ಜಾತಿ, ಧರ್ಮದ ಪರವಾಗಿರಬಾರದು. ಸಮಾಜಮುಖಿಯಾಗಿ, ದುರ್ಬಲರ ಪರವಾಗಿ ಕರ್ತವ್ಯವನ್ನು ನಿರ್ವಹಿಸಿ. ಇನ್ನೇನಾದರು ನಿಮ್ಮ ನ್ಯಾಯಯುತ ಬೇಡಿಕೆಗಳು, ಒತ್ತಾಯವಿದ್ದರೆ ನಮ್ಮ ಸರ್ಕಾರ ಈಡೇರಿಸಲಿದೆ ಎಂದು ಭರವಸೆಯಿತ್ತರು.
ಪತ್ರಿಕಾಧರ್ಮಕ್ಕೆ ಯಾವುದೇ ಕಾಲದಲ್ಲು ಧಕ್ಕೆ ಬಾರದಂತೆ ನಡೆದುಕೊಳ್ಳುವುದು ನಿಮ್ಮೆಲ್ಲರ ಜವಾಬ್ದಾರಿ. ನಿಮ್ಮದು ಶಕ್ತಿಯುತ ಮಾಧ್ಯಮ. ನಮಗಿಂತ ನಿಮ್ಮನ್ನು ಜನರು ಹೆಚ್ಚು ನಂಬುತ್ತಾರೆ. ಅದರಿಂದ ಅವರ ನಂಬಿಕೆ, ವಿಶ್ವಾಸಾರ್ಹತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಅತ್ಯಂತ ಅವಶ್ಯ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಬದಲಾವಣೆ ತರುವ ಪ್ರತಿಯೊಬ್ಬರು ಆತ್ಮವಾಲೋಕನ ಮಾಡಿಕೊಳ್ಳಬೇಕು ಎಂದರು.
ಪತ್ರಿಕೋದ್ಯಮ ವೃತ್ತಿಯಾಗೇ ಇರಬೇಕು. ಕೆಲವು ವರ್ಷಗಳಿಂದೀಚೆ ಉದ್ಯಮವಾಗಿ ಮಾರ್ಪಟ್ಟಿದೆ. ವೃತ್ತಿ ಆಗಿದ್ದಾಗ ಸಮಾಜದ, ಜನರ ಹಿತ ಮುಖ್ಯವಾಗಿರುತ್ತದೆ. ಉದ್ಯಮ ಆದ ಕೂಡಲೇ ಅದರ ಉದ್ದೇಶಗಳು ಬದಲಾಗುತ್ತವೇ. ಸಂವಿಧಾನದ ಆಶಯಗಳು ಈಡೇರಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯಗಳ ಗಟ್ಟಿಯಾಗಬೇಕು. ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾವೃತ್ತಿಯ ಕರ್ತವ್ಯ. ಧ್ವನಿ ಇಲ್ಲದವರ ಪರವಾಗಿ ವೃತ್ತಿ ಇದ್ದಾಗ ಸಮಾಜಕ್ಕೆ ಅನುಕೂಲಕರವಾಗಿರಲಿದೆ. ಸಮಾಜದಲ್ಲಿರುವ ಮೇಲ ಜಾತಿ, ಕೆಳ ಜಾತಿಗಳ ನಡುವಿನ ತಾರತಮ್ಯ, ಅಸಮಾನತೆ ಕೊನೆಯಾಗಿಸುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಾಜ್ಯ ಸರ್ಕಾರಿ ನೌಕರರಿಗೆ ಜಾರಿಗೆ ತಂದಿರುವಂತೆ ಆರೋಗ್ಯ ಸಂಜೀವಿನಿ ಮಾದರಿಯಲ್ಲಿ ಪತ್ರಕರ್ತರ ಆರೋಗ್ಯ ವಿಮೆ ಜಾರಿ ತರುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಈಗಾಗಲೇ ರಾಜ್ಯ ಸರ್ಕಾರವು ಗ್ರಾಮೀಣ ಪತ್ರಕರ್ತರಿಗೆ ಬಸ್ಪಾಸ್ ನೀಡುತ್ತಿದೆ. ಮಾಶಾಸನವನ್ನು ಸಹ 12 ಸಾವಿರಕ್ಕೆ ಹೆಚ್ಚಿಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಕೆ.ಷಡಕ್ಷರಿ, ಎಚ್.ವಿ.ವೆಂಕಟೇಶ್, ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರ, ಚಿದಾನಂದ ಎಂ.ಗೌಡ, ಕೇಂದ್ರ ವಲಯ ಐಜಿಪಿ ಲಾಭುರಾಮ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಎಸ್ಪಿ ಕೆ.ವಿ.ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಕಂದಾಚಾರ, ಮೌಢ್ಯ ಬಿತ್ತಬೇಡಿ
ಮಾಧ್ಯಮಗಳಾಗಲಿ, ಪತ್ರಕರ್ತರಾಗಲಿ ಮೌಢ್ಯ, ಕಂದಾಚಾರವನ್ನು ಬಿತ್ತಬೇಡಿ. ವೈಜ್ಞಾನಿಕತೆ, ವೈಚಾರಿಕತೆ ಜತೆಗೆ ಸಂಶೋಧನೆಗೆ ಪತ್ರಕರ್ತರು ಒತ್ತು ಕೊಡಬೇಕು. ನಾನು ಎಂದು ಮೌಢ್ಯ ಆಚರಿಸಿಲ್ಲ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಅನ್ನುತ್ತಾರೆ. ಇನ್ನೂ ಕಾಗೆಯೊಂದು ಕಾರಿನ ಮೇಲೆ ಕುಳಿತಾಗ ಅಧಿಕಾರ ಹೋಗೆ ಬಿಟ್ಟಿತು ಅನ್ನುವ ಚರ್ಚೆಗಳನ್ನು ಟಿವಿಗಳಲ್ಲಿ ಮಾಡಿದ್ದರು. ಈ ಎರಡು ಸಂದರ್ಭಗಳಲ್ಲು ನನ್ನ ಸ್ಥಾನ ಗಟ್ಟಿಯಾಯಿತೆ ಹೊರುತು, ಅಧಿಕಾರ ಕಳೆದುಕೊಳ್ಳಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜಣ್ಣ ಮನುಸ್ಮೃತಿ ಓದು
ಪತ್ರಕರ್ತರ ಸಮ್ಮೇಳನ ಉದ್ಘಾಟನಾ ಭಾಷಣ ವೇಳೆ ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಮೇಲಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ನೀನು ಮನುಸ್ಮೃತಿ ಓದು ಅಂತ ಹೇಳಿದ ವೈರುಧ್ಯ ನಡೆಯಿತು.
ಸಮಾಜದಲ್ಲಿರುವ ಜಾತಿ ತಾರತಮ್ಯವನ್ನು ಉಲ್ಲೇಖಿಸಿ ಮಾತನಾಡುವ ವೇಳೆ ಮೇಲ್ಜಾತಿ, ಕೆಳ ಜಾತಿ ಎಂದು ಸಿಎಂ ಪ್ರಸ್ತಾಪಿಸಿದಾಗ, ರಾಜಣ್ಣ ಹಿಂದುಳಿದವರು, ಮುಂದುವರೆದವರು ಅನ್ನಿ ಅಂದರು. ಇದಕ್ಕೆ ಜಾತಿ ಅನ್ನುವುದು ಈ ಸಮಾಜದ ವಾಸ್ತವ. ನೀನು ಮನುಸ್ಮೃತಿ ಓದಿದರೆ ಇನ್ನಷ್ಟು ಸ್ಪಷ್ಟವಾಗಲಿದೆ ಎಂದರು. ಇಬ್ಬರ ನಡುವೆ ಚರ್ಚೆ ನಡೆಯಿತು. ನನ್ನ ಸ್ವಾತಂತ್ರ್ಯ ನಾನು ಹಾಗೇ ಹೇಳುತ್ತೇನೆ. ನಿನ್ನ ಭಾಷಣದಲ್ಲಿ ಹಿಂದುಳಿದವರು ಅಂತಾನೇ ಬಳಸು ಎಂದು ನಗುತ್ತಲೇ ಹೇಳಿದ ಪ್ರಸಂಗ ನಡೆಯಿತು.