ರಾಜ್ಯಮಟ್ಟದ ಸ್ವಚ್ಛತಾ ಅಭಿಯಾನ

scouts
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆಯಿಂದ ಐದು ದಿನಗಳ ರಾಜ್ಯಮಟ್ಟದ ಕಡಲ ತೀರದ ಚಾರಣ, ಪ್ರಕೃತಿ ಅಧ್ಯಯನ ಮತ್ತು ಸ್ವಚ್ಛತಾ ಅಭಿಯಾನ ಇತ್ತೀಚೆಗೆ ಕುಂಭಾಶಿಯ ಆನೆಗುಡ್ಡೆ ಸಭಾಭವನದಲ್ಲಿ ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸಂಸ್ಥೆಯ ಮುಖ್ಯಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕಿರಣ್‌ಕುಮಾರ್ ಕೊಡ್ಗಿ ಶುಭಹಾರೈಸಿದರು. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ರಮಣ ಉಪಾಧ್ಯಾಯ, ಪ್ರಮುಖರಾದ ರವಿರಾಜ್ ಉಪಾಧ್ಯಾಯ, ಗುಣರತ್ನಾ, ಕೆ.ಆರ್.ನಾಯ್ಕ, ಆನಂದ ಸಿ.ಕುಂದರ್, ಅಭಿನಂದನ್ ಶೆಟ್ಟಿ, ಜನಾರ್ದನ ಕೊಡವೂರು, ಜ್ಯೋತಿ ಜೆ.ಪೈ., ಆನಂದ ಅಡಿಗ ಉಪಸ್ಥಿತರಿದ್ದರು. ಸುಮನಾ ಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಕುಂಭಾಶಿ ಆನೆಗುಡ್ಡೆಯಿಂದ ಕಡಲತೀರ ಚಾರಣ ಪ್ರಾರಂಭವಾಗಿದ್ದು, ಕೋಡಿ ಸೀ ವಾಕ್ ಬೀಚ್ ಪರಿಸರದಲ್ಲಿ ಶಿಬಿರಾಗ್ನಿ ನಡೆಯಿತು. ಗಂಗೊಳ್ಳಿ ಕಡಲ ತೀರದಲ್ಲಿ ಚಾರಣ ನಡೆಯಿತು. ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸರ್ವಧರ್ಮ ಪ್ರಾರ್ಥನೆ ಮತ್ತು ಸ್ವಚ್ಛತಾ ಶಿಬಿರ ಮೂಲಕ ಶಿಬಿರ ಸಮಾರೋಪಗೊಂಡಿತು.

ಗೌರವಾರ್ಪಣೆ

ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ರಾಜ್ಯ ಸಂಸ್ಥೆಯಿಂದ ಮೆಡಲ್ ಆಫ್ ಮೇರಿಟ್ ಸೇವಾ ಪದಕಕ್ಕೆ ಭಾಜನರಾದ ಗುಣರತ್ನಾ ಅವರನ್ನು ರಾಜ್ಯದ ಮುಖ್ಯಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net