ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಹೋರಾಟ

133
Published on

ಹೊಸದುರ್ಗ: ರೈತರ ಹಿತ ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಹೋರಾಟ ರೂಪಿಸುವುದಾಗಿ ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಹೇಳಿದರು.

ಪಟ್ಟಣದ ರಾಜ್ಯ ರೈತ ಸಂಘದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಿಜೆಪಿ, ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿಲ್ಲ. ಆದರೆ, ರಾಜ್ಯ ಸರ್ಕಾರ ಈ ಯೋಜನೆಗಳಿಗೆ ವರ್ಷ 65 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. 5 ವರ್ಷಕ್ಕೆ 3 ಲಕ್ಷ ಕೋಟಿ ರೂ. ಅವಶ್ಯಕತೆಯಿದೆ ಎಂದರು.

ರಾಜ್ಯ ಸರ್ಕಾರ ಕೈಗೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 2 ಲಕ್ಷ ಕೋಟಿ ರೂ. ಅಗತ್ಯವಿದೆ. ಗ್ಯಾರಂಟಿಗೆ ನೀಡುತ್ತಿರುವ 3 ಲಕ್ಷ ಕೋಟಿ ರೂ. ಗಳನ್ನು ನೀರಾವರಿಗೆ ಬಳಸಿದರೆ ರಾಜ್ಯದ ರೈತರ ಬದುಕು ಹಸನಾಗುತಿತ್ತು. ಮತ ಬ್ಯಾಂಕ್ ರಾಜಕಾರಣದಿಂದ ಮಧ್ಯ ಕರ್ನಾಟಕದ ಜನರು ಬರಗಾಲದ ಸುಳಿಗೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ರೈತರ ಪಡಿತರ ಚೀಟಿಗಳನ್ನು ರದ್ದು ಮಾಡುವ ಕೆಲಸಕ್ಕೆ ಮುಂದಾಗಿರುವುದು ಕೂಡ ರೈತ ವಿರೋಧಿ ಕ್ರಮವಾಗಿದೆ. ಸ್ಥಳೀಯ ಶಾಸಕರು ಆಹಾರ ಸರಬರಾಜು ನಿಗಮದ ಅಧ್ಯಕ್ಷರಾಗಿ ಬಿಪಿಎಲ್ ಕಾರ್ಡ್‌ಗಳನ್ನು ಉಳಿಸುವ ಕೆಲಸಕ್ಕೆ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಸರ್ಕಾರವು ಭದ್ರಾ ಯೋಜನೆಗೆ ತನ್ನ ಪಾಲಿನ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ನಡೆಸಿದರೆ ಕೇಂದ್ರವು ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ 2023 ಅನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿ ರೈತರಿಗೆ ಉತ್ತೇಜನ ನೀಡುವ ಜತೆಗೆ ತಮ್ಮ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಆದಾಯ ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿ ಅನುದಾನ ಒದಗಿಸಿದೆ. ಸಾವೆ ಬೆಳೆ ಉತ್ತಮವಾಗಿ ಬಂದಿದ್ದರೂ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್ ಮಾತನಾಡಿ, ರಾಜ್ಯ ಸರ್ಕಾರವು ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ. ಮಂತ್ರಿಗಳು ಹಾಗೂ ಶಾಸಕರು ಗ್ರಾಮೀಣ ಪ್ರದೇಶಗಳಿಗೆ ತೆರಳದೆ ವಿಧಾನಸೌಧದಲ್ಲಿ ಕುಳಿತು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ ಎಂದು ದೂರಿದರು.

ಎಂಎಲ್‌ಸಿ ಕೆ.ಎಸ್.ನವೀನ್, ರೈತ ಸಂಘದ ತಾಲೂಕಾಧ್ಯಕ್ಷ ಬೋರೇಶ್, ಬಿಜೆಪಿ ಮುಖಂಡರಾದ ಟಿ.ಟಿ.ವೆಂಕಟೇಶ್ ಯಾದವ್, ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್, ಕೆ.ಎಸ್.ಕಲ್ಮಠ್, ಗೂಳಿಹಟ್ಟಿ ಜಗದೀಶ್, ದಾಳಿಂಬೆ ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net