ಕಾಂಗ್ರೆಸ್ ಸರ್ಕಾರದಿಂದ ರಾಜ್ಯ ಅಧಃಪತನ

bjp
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಅಪ್ರಯೋಜನವುಳ್ಳ ವಿವಿಧ ಯೋಜನೆಗಳು, ಜನವಿರೋಧಿ ನೀತಿಯಿಂದಾಗಿ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ಕಾಂಗ್ರೆಸ್ ಸರ್ಕಾರ ತಳ್ಳುತ್ತಿದ್ದು, ಈ ಸರ್ಕಾರದಲ್ಲಿ ಸಂಪೂರ್ಣ ಭ್ರಷ್ಟ ಸಚಿವರೇ ತುಂಬಿದ್ದಾರೆ. ರಾಜ್ಯ ಸರ್ಕಾರದ ಅಭಿವೃದ್ಧಿ ವಿರೋಧಿ ನೀತಿಗಳ ಖಂಡಿಸಿ ಹೋರಾಡಬೇಕಿದೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.

ವಿಕಾಸ ಕಚೇರಿಯಲ್ಲಿ ಸೋಮವಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಲ್ಲಿಂದ ದರ ಏರಿಕೆಯನ್ನೇ ಕಾಣುತ್ತಿದ್ದೇವೆ. ಈ ಸರ್ಕಾರದ ಆಡಳಿತದಲ್ಲಿ ಬಡವರ ಜೀವನ ಅಧೋಗತಿಗೆ ಬೀಳುವುದು ನಿಶ್ಚಿತ. ಯಾವುದೇ ಸರ್ಕಾರಿ ಕಚೇರಿಗೆ ತೆರಳಿದರೂ ಲಂಚದ ಹಾವಳಿಯಿದ್ದು, ಅಧಿಕಾರಿಗಳಿಂದ ಸಚಿವರ ತನಕ ಪಾಲುಗಳಿವೆ. ಆದರೆ ಅಭಿವೃದ್ಧಿಗಳಿಗೆ ಮಾತ್ರ ಸರ್ಕಾರದಲ್ಲಿ ಸಂಪನ್ಮೂಲಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ಕೆಂಪುಕಲ್ಲು, ಮರಳು ಪೂರೈಕೆಗೆ ಅಸಮರ್ಪಕ ನಿಯಮಗಳ ಜಾರಿಗೊಳಿಸವುದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ದರೋಡೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಿನ ಹೋರಾಟದ ಅನಿವಾರ್ಯ ಇದೆ ಎಂದು ಶಾಸಕರು ಸರ್ಕಾರದ ನಡೆಯನ್ನು ಖಂಡಿಸಿದರು.

ಪ್ರಮುಖರಾದ ನವೀನ್ ನಾಯಕ್, ಮಣಿರಾಜ್ ಶೆಟ್ಟಿ, ಮಹಾವೀರ ಹೆಗ್ಡೆ, ಜಯರಾಮ್ ಸಾಲ್ಯಾನ್, ರೇಷ್ಮಾ ಉದಯ ಶೆಟ್ಟಿ ಉಪಸ್ಥಿತರಿದ್ದರು. ಬೋಳ ಸತೀಶ್ ಪೂಜಾರಿ ಸ್ವಾಗತಿಸಿದರು. ಶಿವಪುರ ಸುರೇಶ್ ಶೆಟ್ಟಿ ವಂದಿಸಿದರು. ಶ್ರೀಕಾಂತ್ ನಿರೂಪಿಸಿದರು.

7000 ಬಿಪಿಎಲ್ ಕಾರ್ಡ್ ರದ್ದು

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿವಿಧ ನೆಪಗಳನ್ನೊಡ್ಡಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಕಾರ್ಕಳ ಕ್ಷೇತ್ರದಲ್ಲಿ 7000ಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಅಸಂಖ್ಯಾತ ಬಿಪಿಎಲ್ ಕಾರ್ಡುಗಳು ರದ್ದಾಗಿವೆ ಎಂದು ಶಾಸಕ ಸುನೀಲ್‌ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net