ರಾಜ್ಯದಲ್ಲಿ 1.50 ಕೋಟಿ ಸದಸ್ಯತ್ವ ನೋಂದಣಿ: ಬಿಜೆಪಿ ಗುರಿ

274
Published on

ದಾವಣಗೆರೆ: ಭಾರತೀಯ ಜನತಾ ಪಕ್ಷದಿಂದ ರಾಜ್ಯದಲ್ಲಿ 1.50 ಕೋಟಿ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತಾ ಅಭಿಯಾನ-2024 ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ಬಿಜೆಪಿಯಿಂದ 2014ರಲ್ಲಿ ನಡೆಸಲಾದ ಮೊದಲ ಸದಸ್ಯತ್ವ ಅಭಿಯಾನದಲ್ಲಿ ದೇಶದಲ್ಲಿ 11 ಕೋಟಿಗೂ ಅಧಿಕ ಹಾಗೂ ರಾಜ್ಯದಲ್ಲಿ 74.88 ಲಕ್ಷ ಸದಸ್ಯರು ಹಾಗೂ 2019ರಲ್ಲಿ ಕೈಗೊಂಡಿದ್ದ 2ನೇ ಸದಸ್ಯತ್ವ ಅಭಿಯಾನದಲ್ಲಿ ರಾಷ್ಟ್ರದಲ್ಲಿ 18 ಕೋಟಿ ಹಾಗೂ ರಾಜ್ಯದಲ್ಲಿ 1.01 ಕೋಟಿ ಸದಸ್ಯರನ್ನು ನೋಂದಾಯಿಸಲಾಗಿದೆ ಎಂದು ತಿಳಿಸಿದರು.

ಆ.28 ರಿಂದ 30ರ ವರೆಗೆ ಮೂರು ದಿನಗಳ ಕಾಲ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಮಂಡಲ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದೆ. 31ರಂದು ರಾಜ್ಯದ 58,800 ಬೂತ್‌ಗಳಲ್ಲಿ ಸಭೆ ನಡೆಸಲು ರಾಷ್ಟ್ರೀಯ ವರಿಷ್ಠರಿಂದ ನಿರ್ದೇಶನ ನೀಡಲಾಗಿದೆ ಎಂದರು.

ಪ್ರಸಕ್ತ ಸದಸ್ಯತಾ ಅಭಿಯಾನ 2030ರ ವರೆಗೆ ನಿರಂತರವಾಗಿರಲಿದೆ. ಸದಸ್ಯತ್ವ ನೋಂದಣಿ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಎಲ್ಲ ಮಂಡಲಗಳು ಇದಕ್ಕೆ ಪೂರ್ಣ ಸಹಕಾರ ನೀಡಬೇಕು. ಕಾರ್ಯಕರ್ತರು ಮನೆ ಮನೆ ತಲುಪುವ ಮೂಲಕ ಗುರಿ ಸಾಧನೆ ಮಾಡಬೇಕು ಎಂದು ಹೇಳಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಭಾರತೀಯ ಜನತಾ ಪಕ್ಷವು ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ, ಸರ್ವ ಜನಾಂಗದವರನ್ನು ಒಳಗೊಂಡ ಹಾಗೂ ಸಾಮಾಜಿಕ ನ್ಯಾಯ ನೀಡುವ ಪಕ್ಷವಾಗಿದೆ. ಸಾಮಾನ್ಯ ಕಾರ್ಯಕರ್ತರಿಗೂ ಪಕ್ಷದಲ್ಲಿ ಗೌರವವಿದೆ ಎಂದು ತಿಳಿಸಿದರು.

ಬಿಜೆಪಿಯು ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಭಾವನೆ ಹೊಂದಿದ್ದರೆ, ಕಾಂಗ್ರೆಸ್‌ನವರಿಗೆ ಕುಟುಂಬವೇ ಮುಖ್ಯವಾಗಿದೆ ಎಂದ ಅವರು, ಬಿಜೆಪಿ ಸದಸ್ಯತಾ ಅಭಿಯಾನದ ಮೂಲಕ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಂಘಟಿಸಿ ನಾಯಕತ್ವ ಬೆಳೆಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಜೆ. ಅಜಯ್‌ಕುಮಾರ್, ಮಾಡಾಳ್ ಮಲ್ಲಿಕಾರ್ಜುನ್, ಜಿಲ್ಲಾ ವಕ್ತಾರ ಬಿ.ಎಂ. ಸತೀಶ್ ಕೊಳೇನಹಳ್ಳಿ, ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್ ನಾಯ್ಕ, ಪಾಲಿಕೆ ಉಪ ಮೇಯರ್ ಯಶೋದಾ ಯಗ್ಗಪ್ಪ, ವಿಪಕ್ಷ ನಾಯಕ ಪ್ರಸನ್ನಕುಮಾರ್, ಧನಂಜಯ್ ಕಡ್ಲೇಬಾಳ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net