

ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಇನ್ನು ಕೆಲವೇ ಸಮಯ ಇರುವಾಗಲೇ ಪಂಚಮಸಾಲಿ ಸಮುದಾಯದ ಹೋರಾಟ ತೀವ್ರಗೊಂಡಿದೆ.
ಮುಖ್ಯಮಂತ್ರಿ ಸರ್ಕಾರಿ ನಿವಾಸ ಕಾವೇರಿ ಬಳಿ ಜಮಾಯಿಸಿದ ಪಂಚಮಸಾಲಿ ಸಮುದಾಯದ ಮಹಿಳಾ ಘಟಕದ ಕಾರ್ಯಕರ್ತರು, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಮುಂದಾದರು. ಕೆಲಕಾಲ ರಸ್ತೆಯಲ್ಲೇ ನಿಂತ ಪಂಚಮಸಾಲಿ ಮಹಿಳೆಯರು, ಸಿಎಂ ಮನೆಗೆ ಬರುವ ವಾಹನಗಳಿಗೆ ಅಡ್ಡಿಪಡಿಸಿದರು. ಇದರಿಂದ ಸ್ಥಳದಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಯಿತು.
2ಎ ಮೀಸಲು ವಿಚಾರದಲ್ಲಿ ಸಿಎಂಗೆ ಮನವಿ ಪತ್ರ ಸಲ್ಲಿಸಲೇಬೇಕೆಂದು ಹೋರಾಟಗಾರರು ಪಟ್ಟು ಹಿಡಿದಿದ್ದರಿಂದ ಪೊಲೀಸರು ಗಲಿಬಿಲಿಗೊಂಡರು. ಕೊನೆಯಲ್ಲಿ ಪಂಚಮಸಾಲಿ ಹೋರಾಟಗಾರರನ್ನು ಪೊಲೀಸ್ ವಶಕ್ಕೆ ಪಡೆಯಲಾಯಿತು.
ಬಜೆಟ್ ಮಂಡನೆ ಪೂರ್ವದಲ್ಲಿ ಸಂಪ್ರದಾಯದಂತೆ ದೇವಸ್ಥಾನಗಳಿಗೆ ತೆರಳಲು ಸಿಎಂ ಸಿದ್ಧತೆ ನಡೆಸಿದಾಗಲೇ ಪ್ರತಿಭಟನೆ ಎದುರಾಯಿತು. ಇದರಿಂದ ಸಿಎಂ ಕೂಡ ಕಸಿವಿಸಿಗೊಂಡರೆಂದು ತಿಳಿದುಬಂದಿದೆ.