

ಬಳ್ಳಾರಿ: ರಾಜ್ಯ ಬಜೆಟ್ ಬಗ್ಗೆ ಜನರ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹುಸಿಗೊಳಿಸಿದೆ. ಕಳೆದ ವಿಧಾನಸಭಾ, ಲೋಕಸಭಾ ಹಾಗೂ ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ವಿಜಯದ ಮಾಲೆ ಹಾಕಿದ್ದ ಜಿಲ್ಲೆಯ ಜನರನ್ನು ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ.
ಇದನ್ನೂ ಓದಿ: ಬಳ್ಳಾರಿ-ವಿಜಯನಗರ ಜಿಲ್ಲೆಗಳ ಕಡೆಗಣಿಸಿದ ಆಯವ್ಯಯ ಬಜೆಟ್
ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಅನುದಾನ ಬಿಡುಗಡೆಗೊಂಡು ಕಾಮಗಾರಿಗಳು ಆರಂಭವಾಗಿ ಸಾರ್ವಜನಿಕರ ಸೇವೆಗೆ ಸದುಪಯೋಗವಾಗಲಿದೆ ಎಂಬ ಉದ್ದೇಶ ಕಮರಿದೆ. ನಗರದಲ್ಲಿನ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯನ್ನು ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಹಾಗೂ ಸಂಡೂರು ಮತ್ತು ಸಿರಗುಪ್ಪ ತಾಲೂಕಿನ 100 ಹಾಸಿಗೆಗಳ ಆಸ್ಪತ್ರೆಯನ್ನು 150 ಹಾಸಿಗೆಗಳ ವಿಭಾಗೀಯ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿಯಂತ್ರಿಸಲು ಜಿಲ್ಲೆಯಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮರಾಗಳನ್ನು ಅಳವಡಿಸಲು ಅನುದಾನ ಬಿಡುಗಡೆಗೊಳಿಸಲಾಗಿದೆ. ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಶಂಕಿತ ಉಗ್ರರ ಹೆಜ್ಜೆ ಗುರುತುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಕಂಪ್ಲಿಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಕೆಕೆಆರ್‌ಡಿಬಿ ಮ್ಯಾಕ್ರೋ ಅನುದಾನದಡಿ ಜಿಟಿಟಿಸಿ ಕೇಂದ್ರ ಸ್ಥಾಪಿಸಲು ಕ್ರಮ ವಹಿಸಲಾಗಿದೆ.
ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ, ಕಂಪ್ಲಿಯಿಂದ ಗಂಗಾವತಿ ಮಾರ್ಗದಲ್ಲಿರುವ ತುಂಗಭದ್ರಾ ನದಿ, ಬಳ್ಳಾರಿ ತಾಲೂಕಿನ ಹಗರಿ ನದಿಗೆ ಗೆ ಹೊಸ ಸೇತುವೆ ನಿರ್ಮಾಣ, ವೈ.ಕಗ್ಗಲ್ ಏತ ನೀರಾವರಿ ಯೋಜನೆಗೆ ಮರುಜೀವ ನೀಡುವ ಕೆಲಸ ನಡೆದುಲ್ಲ. ಸಿರಗುಪ್ಪದಲ್ಲಿ ಮಿನಿಸೌಧ ನಿರ್ಮಾಣ, ಕುಡತಿನಿಯಲ್ಲಿ ನರ್ಸಿಂಗ್ ಕಾಲೇಜು ನಿರ್ಮಾಣ, ರಾಬಕೊವಿ ಒಕ್ಕೂಟದ ಮೆಗಾ ಡೈರಿ ಸ್ಥಾಪನೆ, ಬಳ್ಳಾರಿ ಕೋಟೆಗೆ ರೋಪ್ ವೇ ನಿರ್ಮಾಣ, ಸರ್ಕಾರಿ ಪದವಿ ಕಾನೂನು ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚುವಾರಿ ಅನುದಾನ, ರೇಡಿಯೊ ಪಾರ್ಕ್ ಮೇಲ್ಸೇತುವೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸ್ಥಾಪನೆ, ಜೀನ್ಸ್ ಅಪೆರಲ್ ಪಾರ್ಕ್ ಸ್ಥಾಪನೆಗೆ ಅನುದಾನ ಘೋಷಣೆ, ವಿಮಾನ ನಿಲ್ದಾಣ ಕಾಮಗಾರಿ ಆರಂಭ, ರಾಜ್ಯದಲ್ಲೇ ಅತಿ ಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯುವ ಜಿಲ್ಲೆಯಲ್ಲಿ ರೈತರ ಬಹುದಿನಗಳ ಬೇಡಿಕೆ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ, ಸಂಡೂರಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ಹಲವು ಯೋಜನೆಗಳಿಗೆ ಬಜೆಟ್‌ನಲ್ಲಿ ಹಸಿರು ನಿಶಾನೆ ತೋರದೆ ಇರುವುದು ಜನರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಿಎಂ ಸಿದ್ದರಾಮಯ್ಯ ಅಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ, ಅವಳಿ ಜಿಲ್ಲೆಯ ಜನರಿಗೆ ಈ ಬಾರಿ ಬಜೆಟ್‌ನಲ್ಲಿ ನಿರೀಕ್ಷೆ ಮೀರಿ ಅನುದಾನ ಹಾಗೂ ಹೊಸ ಯೋಜನೆಗಳು ಘೋಷಣೆಯಾಗಲಿವೆ ಎಂಬ ಕುತೂಹಲ ಮೂಡಿತ್ತು. ಬಜೆಟ್ ನೋಡಿದರೆ ಜಿಲ್ಲಾ ಉಸ್ತುವಾರಿ ಸಚಿವರೇ ಜಿಲ್ಲೆಯನ್ನು ಕಡೆಗಣಿಸದಂತೆ ಭಾಸವಾಗುತ್ತಿದೆ. ಮಾಜಿ ಸಚಿವ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಸ್ವಕ್ಷೇತ್ರಕ್ಕೆ ಈ ಬಾರಿ ಒಂದು ಯೋಜನೆಯೂ ಘೋಷಣೆಯಾಗಿಲ್ಲ. ಮತ್ತೆ ಸಚಿವ ಸ್ಥಾನ ಪಡೆಯುವುದಕ್ಕೆ ದೆಹಲಿ ನಾಯಕರ ಮನವೊಲಿಕೆ ಮಾಡುತ್ತಿರುವ ಬಿ.ನಾಗೇಂದ್ರ ಸ್ವಕ್ಷೇತ್ರ ಅಭಿವೃದ್ಧಿಗಾಗಿ ಸಿಎಂ ಜತೆ ಚರ್ಚಿಸಲು ಮುಂದಾಗಿಲ್ಲ ಎಂಬುದು ಕಂಡುಬರುತ್ತಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದರೂ ಯಾವುದೇ ಪ್ರಮುಖ ಯೋಜನೆ ಜಿಲ್ಲೆಗೆ ಘೋಷಣೆಯಾಗಿಲ್ಲ.
ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ ಅತ್ಯಂತ ಪ್ರಯಾಸದಾಯಕವಾಗಿದ್ದು, ಬಳ್ಳಾರಿ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ. ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸುವಲ್ಲಿ ಸಾಕಷ್ಟು ಪರದಾಡಿದ್ದಾರೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಯಾವುದೇ ಹೊಸ ಯೋಜನೆಯನ್ನು ಘೋಷಣೆ ಮಾಡಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. | ವೈ.ಎಂ.ಸತೀಶ್, ವಿಧಾನ ಪರಿಷತ್ ಸದಸ್ಯ, ಬಳ್ಳಾರಿ