

State Budget 2025 : 2025-26ನೇ ಸಾಲಿನ ಬಜೆಟ್ ಮಂಡನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ದಾಖಲೆಯ 16ನೇ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದು, ಜನಸಾಮಾನ್ಯರ ನಿರೀಕ್ಷೆ ಗರಿಗೆದರಿದೆ. ಇದರ ನಡುವೆ ಪ್ರತಿಪಕ್ಷ ಬಿಜೆಪಿ ಧರಣಿ ನಡೆಸುತ್ತಿದೆ.
ಬಜೆಟ್ ಮಂಡನೆಗೂ ಮುನ್ನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ವಿಪಕ್ಷ ನಾಯಕರು ಪ್ರತಿಭಟನೆಯನ್ನು ನಡೆಸಿದರು. ಗ್ಯಾರಂಟಿ ಯೋಜನೆಯನ್ನು ನಡೆಸಲಾಗದೇ ಪರದಾಡುತ್ತಿರುವ ಸರ್ಕಾರ ದಲಿತರ ಹಣವನ್ನು ದುರ್ಬಳಕೆ ಮಾಡಿದೆ ಕಿಡಿಕಾರಿದರು.
ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಬಿಜೆಪಿ, ಬೋಗಸ್ ಬಜೆಟ್ ಮಂಡಿಸುವ ಮುನ್ನವೇ ತುಷ್ಟೀಕರಣವನ್ನು ಆರಂಭಿಸಿದ ಭಂಡ ಹಾಗೂ ಭ್ರಷ್ಟರು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4 ರಷ್ಟು ಮೀಸಲಾತಿ ಹಿನ್ನೆಲೆಯಲ್ಲಿ ಬಿಜೆಪಿ ಆಕ್ರೋಶ ಹೊರಹಾಕಿದೆ.
ಈ ಬಾರಿಯ ಬಜೆಟ್ ಅನ್ನು 10.15ಕ್ಕೆ ಅಂದರೆ, ರಾಹುಕಾಲ ಆರಂಭವಾಗುವ ಮುಂಚೆಯೇ ಆರಂಭಿಸಿದ್ದಾರೆ. ಕಳೆದ ಬಾರಿ 3.71 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲಾಗಿತ್ತು. ಈ ಬಾರಿ ಬಜೆಟ್ ಗಾತ್ರ ಹೆಚ್ಚಾಗಲಿದೆ ಎಂದು ಹೇಳಲಾಗಿದ್ದು, 4 ಲಕ್ಷ ಕೋಟಿ ರೂಪಾಯಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆ, ಮೆಟ್ರೋ, ವೈದ್ಯಕೀಯ ಕಾಲೇಜು, ಕೈಗಾರಿಕೆ, ಹೋಟೆಲ್ ಉದ್ಯಮ, ಉನ್ನತ ಶಿಕ್ಷಣ ಇಲಾಖೆ, ಹೈಟೆಕ್ ರಸ್ತೆಗಳ ಅಭಿವೃದ್ಧಿಗೆ ಬಜೆಟ್ನಲ್ಲಿ ಭರಪೂರ ಅನುದಾನ ಘೋಷಣೆಯಾಗುವ ಸಾಧ್ಯತೆಯಿದೆ.