

ಬೆಂಗಳೂರು: ಫೆಂಗಲ್ ಚಂಡಮಾರುತಕ್ಕೆ ರಾಜ್ಯ ಮುದುಡಿದ್ದು, ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಮಂಗಳವಾರ ಇನ್ನಷ್ಟು ತೀವ್ರಗೊಳ್ಳಲಿದೆ.
ಚಾಮರಾಜನಗರದ ಹರದನಹಳ್ಳಿ, ಬೆಂ.ಗ್ರಾಮಾಂತರದ ದೊಡ್ಡಬಳ್ಳಾಪುರ, ಮಂಡ್ಯದ ಕೆವಿಕೆ, ಚಿಕ್ಕಬಳ್ಳಾಪುರ ಹಾಗೂ ರಾಮನಗರದ ಚದುರಾಯಂಗಹಳ್ಳಿ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸೋಮವಾರ ಧಾರಾಕಾರ ವರ್ಷಧಾರೆಯಾಗಿದೆ. ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆ ಜತೆಗೆ ಮೈನಡುಗುವ ಚಳಿಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಇದರಿಂದಾಗಿ ದೈನಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಯಿತು. ಸಾಕಷ್ಟು ಜನರಿಗೆ ಹೊರಗಡೆ ತೆರಳಲು ಸಾಧ್ಯವಾಗಲಿಲ್ಲ.
ಡಿ.3ರಂದು ಕೊಡಗಿನಲ್ಲಿ ಅತಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅರ್ಲಟ್ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮೈಸೂರು, ಶಿವಮೊಗ್ಗದಲ್ಲಿ ಡಿ.3ರಂದು ಭಾರಿ ಮಳೆ ಬೀಳುವ ಸಂಭವ ಇರುವುದರಿಂದ ಆರೆಂಜ್ ಅರ್ಲಟ್ ನೀಡಲಾಗಿದೆ. ಹಾಸನ, ಮಂಡ್ಯ, ರಾಮನಗರದಲ್ಲಿ ಮುಂದಿನ 2 ದಿನ ಯೆಲ್ಲೋ ಅರ್ಲಟ್ ಇರಲಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ದಣ ಕರ್ನಾಟಕದ ಕರಾವಳಿಯುದ್ದಕ್ಕೂ ಗಾಳಿಯ ವೇಗ ಪ್ರತಿ ಗಂಟೆಗೆ 55 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು ಸೇರಿ ಸುತ್ತಮುತ್ತ ಪ್ರದೇಶಗಳಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೊಮ್ಮೆ ಭಾರಿ ಮಳೆಯಾಗಲಿದೆ. ಬೆಳಗ್ಗಿನ ಜಾವದಲ್ಲಿ ಮಂಜು ಬೀಳಲಿದೆ.
ತಾಪಮಾನ ಕುಸಿತ: ಸೈಕ್ಲೋನ್ ಪರಿಣಾಮದಿಂದ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಸರಾಸರಿ 4-5 ಡಿ.ಸೆ. ಉಷ್ಣಾಂಶ ಕುಸಿತವಾಗಿದೆ. ಚಳಿ ರಕ್ಷಣೆಗೆ ಜನರು ಬೆಚ್ಚಗಿನ ಉಡುಪು ಮೊರೆಹೋದರು. ಬೆಂಗಳೂರು 22.4, ಚಾಮರಾಜನಗರ 24.9, ಹಾಸನ 24.9, ಮಂಡ್ಯ 25, ಮೈಸೂರು 26.2 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.