

ಗಿರೀಶ ದೇಶಪಾಂಡೆ ಹಾನಗಲ್ಲ
ತಾಲೂಕಿನ ಮಾಸನಕಟ್ಟಿ ಗ್ರಾಮದ ಬಯಲಾಟ ಕಲಾವಿದ ಹಾಗೂ ಮೃದಂಗ ವಾದಕ ಚನ್ನಬಸಪ್ಪ ಬಸಪ್ಪ ಬೆಂಡಿಗೇರಿ ಅವರು ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಚನ್ನಬಸಪ್ಪ ಅವರು 1945ರಲ್ಲಿ 8ನೇ ವಯಸ್ಸಿನಿಂದಲೇ ಬಯಲಾಟದ ವೇದಿಕೆ ಏರಿದವರು. ಇದರ ಜೊತೆ ಜೊತೆಗೆ ಮೃದಂಗ ವಾದ್ಯವನ್ನೂ ಕರಗತಗೊಳಿಸಿಕೊಂಡರು. ಅವಿರತವಾಗಿ ಸುಮಾರು 75 ವರ್ಷಗಳ ಕಾಲ ಬಯಲಾಟದಲ್ಲಿ ಮೃದಂಗ ವಾದ್ಯವನ್ನು ನುಡಿಸಿ ಜನಮೆಚ್ಚುಗೆ ಗಳಿಸಿದ್ದಾರೆ.
ಚನ್ನಬಸಪ್ಪ ಇದುವರೆಗೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಬಯಲಾಟ ಪ್ರದರ್ಶನಗಳಲ್ಲಿ ಮೃದಂಗ ವಾದನದ ಸಾಥ್ ನೀಡಿದ್ದಾರೆ. ಇದಲ್ಲದೆ, ಸಣ್ಣ ವಯಸ್ಸಿನಿಂದಲೂ ರಂಗಭೂಮಿ ಬಗೆಗೆ ಆಸಕ್ತಿ ಹೊಂದಿ ಬಯಲಾಟ ಪ್ರಯೋಗಗಳಲ್ಲಿ ಕರ್ಣ, ಅಭಿಮನ್ಯು, ಪ್ರಭಾವತಿ, ಚಿತ್ರಾಂಗದೆ, ಉತ್ತರೆ, ಗಣಪತಿ, ದುಷ್ಯಾಸನ ಹಾಗೂ ವಾಲಿ ಮುಂತಾದ ಪಾತ್ರಗಳಲ್ಲಿ ಅಭಿಯಿಸಿ ಸೈ ಎನಿಸಿಕೊಂಡಿದ್ದಾರೆ. ಹಿರಿಯ ಕಲಾವಿದರಾದ ಇವರು ತಮ್ಮ ಕೃಷಿ ವೃತ್ತಿಯೊಂದಿಗೆ ದೊಡ್ಡಾಟ, ಸಣ್ಣಾಟ ಮತ್ತು ಮೃದಂಗ ವಾದ್ಯ ನುಡಿಸುವುದನ್ನು ಪ್ರವೃತ್ತಿಯಾಗಿ ಅಳವಡಿಸಿಕೊಂಡಿದ್ದಾರೆ. ಮಾಸನಕಟ್ಟಿ ಗ್ರಾಮದ ದುರ್ಗಾದೇವಿ, ಬಸವೇಶ್ವರ, ಚಾಮುಂಡೇಶ್ವರಿ ಬಯಲಾಟ ತಂಡಗಳೊಂದಿಗೆ ರಾಜ್ಯದ ಮಂಗಳೂರು, ಬೆಂಗಳೂರು, ಉಡುಪಿ, ಮೂಡಬಿದರೆ, ಹಂಪಿ ಉತ್ಸವ, ಧಾರವಾಡದ ಕಲಾಕ್ಷೇತ್ರ, ಗದಗ ಕಮ್ಮಟ, ಶಿಗ್ಗಾಂವಿ ರಾಕ್ ಗಾರ್ಡನ್, ಜಾನಪದ ವಿಶ್ವ ವಿದ್ಯಾಲಯ, ಬಾಗಲಕೋಟೆ ಸೇರಿದಂತೆ ನೂರಾರು ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಚನ್ನಬಸಪ್ಪ ಅವರು 84ನೇ ಇಳಿವಯಸ್ಸಿನಲ್ಲೂ ಈಗ ಶಿಗ್ಗಾವಿ ಜಾನಪದ ವಿಶ್ವವಿದ್ಯಾಲಯದಲ್ಲಿ ಈ ಕಲೆ ಕುರಿತು 30 ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಮಜಾ ಟಾಕೀಸ್, ಜೀ-ಕನ್ನಡ ವಾಹಿನಿಯಲ್ಲಿಯೂ ಇವರ ಬಯಲಾಟದ ಕಲೆ ಪ್ರದರ್ಶನವಾಗಿವೆ. ಮಾಸನಕಟ್ಟಿ ಗ್ರಾಮದ ದಿ. ಶಂಕ್ರಣ್ಣ ದೇಶಪಾಡೆ ಅವರಿಂದ ಬಯಲಾಟ ಹಾಗೂ ಭೀಮರಾವ್ ದೇಶಪಾಂಡೆ ಅವರಿಂದ ಮೃದಂಗ ವಾದನ ಕಲಿತ ಇವರು, ಬಯಲಾಟ ಕಲೆ ತಮ್ಮ ತಲೆಮಾರಿಗೆ ನಶಿಸಬಾರದೆಂದು 50ಕ್ಕೂ ಅಧಿಕ ಸ್ಥಳೀಯ ಯುವಕರಿಗೆ ಧಾರೆ ಎರೆಯುತ್ತಿದ್ದಾರೆ.
ಕಲೆಯಲ್ಲಿ ಆಸಕ್ತಿ, ನಿರಂತರ ನಿಷ್ಠೆಯ ಫಲವಾಗಿ ಚನ್ನಬಸಪ್ಪ ಅವರಿಗೆ ಉತ್ತರ ಕರ್ನಾಟಕ ಕಲಾವಿದರ ಸಂಘ, ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ, ಜಿಲ್ಲಾ ಯುವಜನ ಮೇಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ದಸರಾ ಉತ್ಸವ, ಕರ್ನಾಟಕ ಬಯಲಾಟ ಅಕಾಡೆಮಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನ, ಹಾವೇರಿ ಜಿಲ್ಲಾ ಉತ್ಸವ, ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿ ಮೊದಲಾದ ಸಂಘ-ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳು ಸಂದಿವೆ.
ಬಯಲಾಟ ತಜ್ಞರಾದ ಟಿ.ಬಿ. ಸೊಲಬಕ್ಕನವರ ಹಾಗೂ ಬಿ.ಡಿ. ಹಿರೇಗೌಡರ, ಶ್ರೀಶೈಲ ಹುದ್ದಾರ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಅತಿ ಹೆಚ್ಚು ಬಯಲಾಟ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪೌರಾಣಿಕ ಕಥೆಗಳನ್ನು ಇಂದಿನ ಪೀಳಿಗೆ ಮರೆಯಬಾರದೆಂಬ ಉದ್ದೇಶ ಹೊಂದಿದ್ದಾರೆ. ಕುರುಕ್ಷೇತ್ರ ಬಯಲಾಟ ಪ್ರಸ್ತುತಿಯಲ್ಲಿ ರಾಜ್ಯದಲ್ಲೇ ಮಾಸನಕಟ್ಟಿ ತಂಡವು ಹೆಸರುವಾಸಿಯಾಗಿದ್ದು, ಈ ನಿಟ್ಟಿನಲ್ಲಿ ಇವರ ಕೊಡುಗೆ ಅಪಾರವಾಗಿದೆ. ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಸಮ್ಮಿಳಿತವಾದ ಭಾಷೆಗಳನ್ನೊಳಗೊಂಡು ಸಣ್ಣಾಟ, ಬಯಲಾಟ ಪ್ರದರ್ಶನ ನೀಡುತ್ತಿರುವ ಇವರು ಅಪ್ಪಟ ಗ್ರಾಮೀಣ ಪ್ರತಿಭೆಯಾಗಿ ಕಂಗೊಳಿಸುತ್ತಿದ್ದಾರೆ.
ಎಂಟನೇ ವಯಸ್ಸಿನಲ್ಲಿ ಆರಂಭವಾದ ನನ್ನ ರಂಗಭೂಮಿ ಪಯಣ 75 ವಸಂತಗಳನ್ನು ಕಂಡಿದೆ. ಸುದೀರ್ಘ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಗ್ರಾಮೀಣ ಕಲೆ-ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವ ಸರ್ಕಾರಕ್ಕೆ ಚಿರಋಣಿಯಾಗಿದ್ದೇನೆ. ಈ ಪ್ರಶಸ್ತಿ ನನ್ನ ಇಡೀ ತಂಡಕ್ಕೆ ಸಲ್ಲುತ್ತದೆ.| ಚನ್ನಬಸಪ್ಪ ಬೆಂಡಿಗೇರಿ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು