

ಬೆಂಗಳೂರು: ರಾಜ್ಯದಲ್ಲಿ ನಿರ್ಜೀವ ಜನನಗಳನ್ನು ಗುರುತಿಸಿ, ಕಾರಣಗಳನ್ನು ವರ್ಗೀಕರಿಸಿ ಹಾಗೂ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ರಾಜ್ಯಮಟ್ಟದ ನಿರ್ಜೀವ ಜನನ (ಸ್ಟಿಲ್ ಬರ್ಥ್) ಆಡಿಟ್ ಸಮಿತಿ ರಚಿಸಿ ನಿರ್ಜೀವ ಜನನ ಕಣ್ಗಾವಲು ಮತ್ತು ಪ್ರತಿಕ್ರಿಯೆ (ಎಸ್‌ಬಿಎಸ್‌ಆರ್) ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.
ಸಮಿತಿಯಲ್ಲಿ ಆರೋಗ್ಯ ಇಲಾಖೆಯ ಉಪ ನಿರ್ದೇಶಕರು (ತಾಯಿ ಆರೋಗ್ಯ) ನೋಡಲ್ ಅಧಿಕಾರಿಯಾಗಿರುತ್ತಾರೆ. ಉಳಿದಂತೆ ಆರೋಗ್ಯ ಇಲಾಖೆ ನಿರ್ದೇಶನಾಲಯದ ಯೋಜನಾ ನಿರ್ದೇಶಕರು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತ ಸಂಶೋಧನಾ ಸಂಸ್ಥೆ ಅಡಿಯಲ್ಲಿನ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ತಾಯಿ ಆರೋಗ್ಯದ ಉಪ ನಿರ್ದೇಶಕರು, ಮಕ್ಕಳ ಆರೋಗ್ಯದ ಉಪನಿರ್ದೇಶಕರು ಹಾಗೂ ಸರ್ಕಾರಿ ಮತ್ತು ಖಾಸಗಿ ವಲಯದ ನುರಿತ ಸೀರೋಗ ಹಾಗೂ ಮಕ್ಕಳ ತಜ್ಞರು ಸಮಿತಿ ಸದಸ್ಯರಾಗಿರುತ್ತಾರೆ.
ಸಮಿತಿ ಕಾರ್ಯಗಳು:
ತಡೆಗಟ್ಟಬಹುದಾದ ಪ್ರಕರಣಗಳು ಮತ್ತು ಜಿಲ್ಲಾ ಅಥವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸಂಭವಿಸುವ ನಿರ್ಜೀವ ಜನನ ಪ್ರಕರಣಗಳ ಬಗ್ಗೆ ಜಿಲ್ಲೆಯಿಂದ ಬಂದಿರುವ ವರದಿ ಪರಿಶೀಲಿಸುವುದು, ಹೆಚ್ಚುವರಿ ನಿರ್ಜೀವ ಜನನ ದರ ಹೊಂದಿದ ಜಿಲ್ಲೆಗಳಲ್ಲಿ ತಡೆಗಟ್ಟಬಹುದಾದ ಆಯ್ದ ಪ್ರಕರಣಗಳ ಆಡಿಟ್ ನಡೆಸುವುದು, ಆರೋಗ್ಯ ವ್ಯವಸ್ಥೆಯ ನ್ಯೂನತೆಗಳ ಗುರುತಿಸಿ, ತಿದ್ದುಪಡಿ ಕ್ರಮಗಳ ಶಿಾರಸು ಮಾಡುವುದು, ತ್ರೈಮಾಸಿಕ ವರದಿಗಳ ಮೂಲಕ ರಾಜ್ಯ ಮಟ್ಟದ ಶಿಾರಸು ಸಲ್ಲಿಕೆ ಮಾಡುವುದು.
ಸಮಿತಿ ಜವಾಬ್ದಾರಿ: ನಿರ್ಜೀವ ಜನನ ಮತ್ತು ತಾಯಿ ಮರಣಗಳನ್ನು ವರದಿ ಮಾಡದಿರುವುದು, ಗಂಭೀರ ಲೋಪವೆಂದು ಪರಿಗಣಿಸುವುದು, ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ನಿರ್ಜೀವ ಜನನದ ವರದಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವುದು. ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ನಿರ್ಜೀವ ಜನನದ ಕುರಿತು ಜಿಲ್ಲಾಧಿಕಾರಿಗಳು ಖಾಸಗಿ ವೈದ್ಯಕೀಯ ಸ್ಥಾಪಿತ ಕಾಯ್ದೆ 2007ರ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಸಮಿತಿಯ ಜವಾಬ್ದಾರಿಯಾಗಿದೆ.
ರಾಜ್ಯ ಮಟ್ಟದ ಆಡಿಟ್ ಸಮಿತಿಯ ಅಧ್ಯಕ್ಷರು ಪ್ರತಿ ಮೂರು ತಿಂಗಳಿಗೆ ಒಮ್ಮೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಮತ್ತು ಇತರೆ ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಗೆ ವರದಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.