

ಬೆಂಗಳೂರು: ಕರೊನಾ ನಿಯಂತ್ರಣಕ್ಕೆ ಬಳಕೆಯಾಗುತ್ತಿರುವ ಪ್ರಮುಖ ಆರು ಉಪಕರಣಗಳು ಇನ್ನು ರಾಜ್ಯದಲ್ಲೇ ಉತ್ಪಾದನೆಯಾಗಲಿವೆ. ವಿದೇಶಗಳ ಮೇಲೆ ಅವಲಂಬಿತವಾಗದೇ ಕರ್ನಾಟಕದ ವಿಜ್ಞಾನಿಗಳು ಮತ್ತು ಸಂಶೋಧಕರು ಈ ಉಪಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ರಾಜ್ಯದ ಐಟಿ- ಬಿಟಿ ಇಲಾಖೆ ವ್ಯಾಪ್ತಿಯ ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಅಡಿಯಲ್ಲಿ ವಿವಿಧ ಸ್ಟಾರ್ಟಪ್ಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದು, ಇದರಿಂದಾಗಿ ವಿದೇಶಿ ಅವಲಂಬನೆಯನ್ನು ತಗ್ಗಿಸಬಹುದಾಗಿದೆ. ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಈ ಆರು ಉತ್ಪನ್ನಗಳನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಇವುಗಳಿಗೆ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾನ್ಯತೆ ಸಿಕ್ಕಿದೆ. ಈ ಕ್ಷಣದಿಂದಲೇ ಇವುಗಳನ್ನು ಎಲ್ಲರೂ ಬಳಸಬಹುದು, ಖರೀದಿ ಮಾಡಬಹುದು.
01. ಶೀಲೆಡೆಕ್ಸ್ 24 ಯಂತ್ರ: ಓವನ್ ಮಾದರಿಯ ಈ ಸಾಧನದಲ್ಲಿ ಅಲ್ಟ್ರಾವೈಲೆಟ್ ಕಿರಣ ಪ್ರಸಾರವಾಗುತ್ತದೆ. ಇದರಿಂದ ವೈರಸ್ 15 ಸೆಕೆಂಡುಗಳಲ್ಲಿ ಸಾಯುತ್ತದೆ. ಕಚೇರಿಗಳು, ಮನೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಲಗೇಜ್, ವಸ್ತುಗಳ ಮೇಲಿರುವ ವೈರಸ್ ನಾಶ ಮಾಡಬಹುದು. ಈ ಉತ್ಪನ್ನವನ್ನು ಬಯೋ ಫೀ ಕಂಪನಿಯ ರವಿಕುಮಾರ್ ಸಂಶೋಧಿಸಿ, ತಯಾರಿಸಿದ್ದಾರೆ.
02. ಫ್ರೋರೋಸೆನ್ಸ್ ಪೋ›ಬ್ಸ್: ಇದು ಕೋವಿಡ್ ಕಿಟ್ನಲ್ಲಿ ಇರಬಹುದಾದ ಪ್ರಮುಖ ಅಂಗ. ಇದು ಇಲ್ಲದಿದ್ದರೆ ವೈರಸ್ ಪತ್ತೆ ಮಾಡಲು ಸಾಧ್ಯವಿಲ್ಲ. ಭಾರತದಲ್ಲಿ ಕೋವಿಡ್ ಕಿಟ್ ತಯಾರಿಸುವ ಕಂಪನಿಗಳಿಗೆ ಈ ಸಂಶೋಧನೆ ವರದಾನವಾಗಿದೆ. ಕಿಟ್ ತಯಾರಿಸುವುದು ಸುಲಭವಾಗಲಿದೆ. ಇದನ್ನು ವಿಎನ್ ಐಆರ್ ಸಂಸ್ಥೆಯ ಡಾ. ಗೋವಿಂದರಾಜು ಮತ್ತು ಡಾ. ಮೆಹರ್ ಪ್ರಕಾಶ್ ಅಭಿವೃದ್ಧಿಪಡಿಸಿದ್ದಾರೆ.
03. ಭ್ರೂಣ ನಿಗಾ ಯಂತ್ರ: ಕೋವಿಡ್ ಇದ್ದಾಗ ಗರ್ಭಿಣಿಯರು ನೇರವಾಗಿ ವೈದ್ಯರನ್ನು ಭೇಟಿಯಾಗಲು ಸಾಧ್ಯವಿಲ್ಲ. ಗರ್ಭಿಣಿ ಈ ಉಪಕರಣವನ್ನು ತಮ್ಮ ಹೊಟ್ಟೆ ಮೇಲಿಟ್ಟುಕೊಂಡರೆ, ವೈದ್ಯರು ತಾವಿದ್ದಲ್ಲಿಂದಲೇ ಎಲ್ಲ ಮಾಹಿತಿಯೂ ತಿಳಿಯಬಹುದು. ಈ ಯಂತ್ರವನ್ನು ದಕ್ಷ್ ಎಂದು ಕರೆಯಲಾಗುತ್ತದೆ. ಜೆನಿತ್ರೀ ಕಂಪನಿಯ ಡಾ. ಅರುಣ್ ಅಗರವಾಲ್ ಇದನ್ನು ಅಭಿವೃದ್ಧಿಪಡಿಸಿದ್ದಾರೆ.
04. ವಿಟಿಎಂ: ಜೀವಂತ ವೈರಸ್ ಅನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಅತ್ಯಂತ ಸವಾಲಿನದ್ದು, ಅಪಾಯ ಕಾರಿ ಕೂಡ. ಈ ಉಪಕರಣವನ್ನು ವಿದೇಶಗಳಿಂದ ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳ ಬೇಕಾಗಿತ್ತು. ಡೇಕೊಂತೋ ಎಂಬ ಹೆಸರಿನ ಈ ಉತ್ಪನ್ನವನ್ನು ಡಿನೋವೋ ಬಯೋಲ್ಯಾಬ್ಸ್ ನ ಐಬಿಎಬಿಯ ಮಂಜುನಾಥ್ ಹಾಗೂ ದಿನೇಶ್ ಅವರು ಸಂಶೋಧಿಸಿ ತಯಾರಿಸಿದ್ದಾರೆ.