

ಶಿರಸಿ: ನಗರದಲ್ಲಿ ಹಾದು ಹೋಗುವ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿಯನ್ನು ದ್ವಿಪಥಗೊಳಿಸುವ ಸಂಬಂಧ ರಸ್ತೆ ಪಕ್ಕದ ಸರ್ಕಾರಿ ಜಾಗ ತೆರವುಗೊಳಿಸುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿದೆ.
ಲೋಕೋಪಯೋಗಿ ಇಲಾಖೆ ಗಡಿ ಗುರುತಿಸಿದೆ. ಸರ್ಕಾರಿ ಜಾಗವನ್ನು ಜೆಸಿಬಿಯಿಂದ ತೆರವುಗೊಳಿಸಲಾಗುತ್ತಿದೆ. ಯಲ್ಲಾಪುರ ನಾಕಾದಿಂದ ಪಂಡಿತ ಸಾರ್ವಜನಿಕ ಆಸ್ಪತ್ರೆವರೆಗಿನ ನಾಲ್ಕು ಕಿ.ಮೀ. ರಸ್ತೆ ದ್ವಿಪಥಕ್ಕೆ ಭೂಸ್ವಾಧೀನ ಆಗಬೇಕಿದೆ. ರಸ್ತೆ ಮಧ್ಯದಿಂದ ಎರಡೂ ಬದಿಗೆ ತಲಾ 11.50 ಮೀ. ಮತ್ತು ಮುಖ್ಯ ವೃತ್ತದಲ್ಲಿ 18.50 ಮೀ. ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ. ರಸ್ತೆ ಸುಧಾರಣೆಗೆ 15 ಕೋಟಿ ರೂಪಾಯಿ ಮಂಜೂರಾಗಿದೆ.
ಭೂ ಮಾಲೀಕರ ಆಕ್ಷೇಪ: ರಸ್ತೆ ವಿಸ್ತರಣೆ ಸಂಬಂಧ ಕೆಲವು ದಿನಗಳ ಹಿಂದೆ ಒಮ್ಮೆ ಗಡಿ ಗುರುತು ಹಾಕಲಾಗಿತ್ತು. ಈಗ ಇನ್ನೊಂದು ಗುರುತು ಹಾಕಲಾಗಿದೆ. ಕಂದಾಯ ಇಲಾಖೆ ಜತೆಗೂಡಿ ಲೋಕೋಪಯೋಗಿ ಇಲಾಖೆಯವರು ಸರಿಯಾಗಿ ಸರ್ವೆ ನಡೆಸಿಲ್ಲ ಎಂಬ ಅಭಿಪ್ರಾಯ ಕೆಲವು ಭೂ ಮಾಲೀಕರಿಂದ ಕೇಳಿಬಂದಿದೆ. ಅಶ್ವಿನಿ
ಸರ್ಕಲ್ನಿಂದ ಎಚ್.ಕೆ.ಎಚ್. ಆಸ್ಪತ್ರೆ ಕ್ರಾಸ್ವರೆಗೆ ಹಿಂದಿನ ಮ್ಯಾಪ್ ಪ್ರಕಾರ 53 ಅಡಿಗಳಷ್ಟು ರಸ್ತೆ ಇದೆ. ಆದರೀಗ ಕೇವಲ 40 ಅಡಿ ರಸ್ತೆ ಗುರುತಿಸಲಾಗಿದೆ. ಕೆಲವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಈ ರೀತಿ ಸರ್ವೆಯಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂದು ಸ್ಥಳೀಯರಾದ ಎಸ್.ಎಂ. ಹೆಗಡೆ ಪ್ರತಿಕ್ರಿಯಿಸಿದರು. ಸರ್ವೆಯಲ್ಲೇ ವ್ಯತ್ಯಾಸ ಉಂಟಾಗಿದ್ದು, ಸರಿಯಾಗಿ ಸರ್ವೆ ನಡೆಸಿ ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ ವಿಸ್ತರಣೆ ನಡೆಸಬೇಕು ಎಂಬ ಆಗ್ರಹ ಹಲವು ಭೂ ಮಾಲೀಕರಿಂದ ವ್ಯಕ್ತವಾಗಿದೆ. ಹೀಗಾಗಿ, ಮೊದಲ ಹಂತದಲ್ಲಿ ಖಾಸಗಿ ಆಸ್ತಿ ಹೊರತುಪಡಿಸಿ ಸರ್ಕಾರಿ ಜಾಗ ತೆರವುಗೊಳಿಸುವ ಕಾರ್ಯ ನಡೆದಿದೆ.
ಮೊದಲ ಹಂತದಲ್ಲಿ ಸರ್ಕಾರಿ ಜಾಗದಲ್ಲಿನ ಆಸ್ತಿಗಳನ್ನು ತೆರವು ಮಾಡುವಂತೆ ಭೂ ಮಾಲೀಕರಿಗೆ ಸೂಚಿಸಲಾಗಿದೆ. ಆ ಪ್ರಕಾರ ಮೊದಲ ಹಂತದ ತೆರವು ಕಾರ್ಯ ನಡೆದಿದೆ. ಸದ್ಯ ಖಾಲಿಯಿರುವ ಜಾಗ ತೆರವು ಮಾಡಲಾಗುತ್ತಿದೆ. ಆ. 26ರ ನಂತರ ಖಾಸಗಿ ಜಾಗ ಗುರುತಿಸಿ ತೆರವು ಕಾರ್ಯ ನಡೆಸಲಾಗುವುದು.| ಎಸ್. ಉಮೇಶ, ಲೋಕೋಪಯೋಗಿ ಇಲಾಖೆ ಎಇಇ