

ಚಿತ್ರದುರ್ಗ: ಮೈದಾನವೊಂದರ ಅಂಗಳದ ಸುತ್ತಲೂ ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು. ಇಲ್ಲೇನು ನಡೆಯುತ್ತಿದೆ ಎಂದು ಇಣುಕಿ ನೋಡಿದರೆ, ರೋಚಕ ಕಬಡ್ಡಿ ಪಂದ್ಯಾವಳಿ.
ನಗರದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ಕಬಡ್ಡಿ, ಕಬಡ್ಡಿ, ಕಬಡ್ಡಿ ಎಂಬ ಕೂಗಿನ ಮಧ್ಯೆ ತೊಡೆ ತಟ್ಟಿ ನಿಂತ ಕ್ರೀಡಾಪಟುಗಳಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿ…
ಸರಸ್ವತಿ ಕಾನೂನು ಮಹಾವಿದ್ಯಾಲಯ, ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಎರಡು ದಿನ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಹೊನಲು-ಬೆಳಕಿನ ಪುರುಷರ ಕಬಡ್ಡಿ ಟೂರ್ನಿ ಆಯೋಜಿಸಲಾಗಿದೆ.
ಆರಂಭಿಕ ಪಂದ್ಯದಲ್ಲಿ ಹುಬ್ಬಳ್ಳಿಯ ಕೆಎಲ್‌ಎಜಿಕೆ ತಂಡವು ಹಾಸನದ ಸರ್ಕಾರಿ ಕಾಲೇಜಿನ ವಿರುದ್ಧ ಕ್ರಮವಾಗಿ 31-8 ಅಂಕದೊಂದಿಗೆ ಭರ್ಜರಿ ಗೆಲುವು ಸಾಧಿಸಿತು. 23 ಅಂಕ ಅಂತರ ಕಾಯ್ದುಕೊಂಡಿತು.
ಎರಡನೇ ಪಂದ್ಯದಲ್ಲಿ ಚಿಕ್ಕೋಡಿ ಕೆಎಲ್‌ಇ ತಂಡ ಬೆಂಗಳೂರಿನ ಆರ್‌ವಿ ಕಾಲೇಜು ತಂಡದ ವಿರುದ್ಧ ಕ್ರಮವಾಗಿ 38-15 ಅಂಕದೊಂದಿಗೆ 23 ಪಾಯಿಂಟ್ಸ್ ಗಳಿಸಿತು.
ಮೂರನೇ ಪಂದ್ಯದಲ್ಲಿ ಬೆಂಗಳೂರಿನ ಎಲ್ ಅಮೀನ್ ಕಾನೂನು ಕಾಲೇಜು ತಂಡ ಹುಬ್ಬಳ್ಳಿಯ ಕೆಎಸ್‌ಎಲ್‌ವಿ ತಂಡದ ವಿರುದ್ಧ ಕ್ರಮವಾಗಿ 44-29 ಅಂಕದೊಂದಿಗೆ 15 ಪಾಯಿಂಟ್ಸ್ ಅಂತರದಿಂದ ಗೆಲುವಿನ ನಗೆ ಬೀರಿತು.
ತುಮಕೂರಿಗೆ ಗೆಲುವು
ನಾಲ್ಕನೇ ಪಂದ್ಯದಲ್ಲಿ ತುಮಕೂರಿನ ವಿದ್ಯೋದಯ ಕಾಲೇಜು ತಂಡ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ತಂಡದ ವಿರುದ್ಧ ಕ್ರಮವಾಗಿ 30-15 ಅಂಕದೊಂದಿಗೆ 15 ಪಾಯಿಂಟ್ಸ್ ಗಳಿಸಿತು.
ಐದನೇ ಪಂದ್ಯದಲ್ಲಿ ಕೋಲಾರ ತಂಡ ಮೈಸೂರು ತಂಡದ ನಡುವೆ ಉಂಟಾದ ಸೆಣಸಾಟದಲ್ಲಿ ಕ್ರಮವಾಗಿ 32-11 ಅಂಕದೊಂದಿಗೆ 21 ಪಾಯಿಂಟ್ಸ್‌ಗಳ ಅಂತರದಿಂದ ವಿಜಯಿಯಾಯಿತು.
ಆರನೇ ಪಂದ್ಯದಲ್ಲಿ ಹುಬ್ಬಳ್ಳಿಯ ಜೆಎಸ್‌ಎಸ್ ತಂಡ ಬೆಂಗಳೂರಿನ ರಾಮಯ್ಯ ತಂಡದ ವಿರುದ್ಧ 21 ಅಂಕಗಳಿಂದ ಗೆಲುವು ಸಾಧಿಸಿತು. ಕ್ರಮವಾಗಿ 33-12 ಅಂಕ ಪಡೆದುಕೊಂಡವು.
ಪ್ರಯಾಸದ ಗೆಲುವು
ಏಳನೇ ಪಂದ್ಯದಲ್ಲಿ ಬೆಂಗಳೂರಿನ ಪಟೇಲ್ ತಂಡ ಗದಗದ ಎಸ್‌ಎ ಮಾನ್ವಿ ತಂಡದ ನಡುವೆ ರೋಚಕ ಹಣಾಹಣಿ ಕೊನೆಯವರೆಗೂ ಮುಂದುವರಿಯಿತು.
ಕ್ರಮವಾಗಿ 31-29 ಅಂಕದೊಂದಿಗೆ ಕೇವಲ 2 ಪಾಯಿಂಟ್‌ಗಳಿಂದ ಪ್ರಯಾಸದ ಗೆಲವು ಸಾಧಿಸಿತು.
ಶಿವಮೊಗ್ಗದ ಸಿಬಿಆರ್ ತಂಡ ಬೆಳಗಾವಿಯ ಆರ್‌ಎಲ್ ತಂಡದ ವಿರುದ್ಧ ಕ್ರಮವಾಗಿ 35-10 ಅಂಕಗಳಿಸಿ, 25 ಪಾಯಿಂಟ್ಸ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.
9ನೇ ಪಂದ್ಯದಲ್ಲಿ ಬೆಂಗಳೂರಿನ ಕೆಎಲ್‌ಇ ಕಾನೂನು ಕಾಲೇಜು ತಂಡ ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜು ತಂಡದ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಕ್ರಮವಾಗಿ 31-30 ಅಂಕದೊಂದಿಗೆ ಕೇವಲ 1ಪಾಯಿಂಟ್ ಅಂತರದಿಂದ ಜಯಗಳಿಸಿತು.