

ಬೆಂಗಳೂರು: ಪಟ್ಟಾಭಿರಾಮನಗರದಲ್ಲಿ ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸುವ ಘಟಕವನ್ನು ಉನ್ನತೀಕರಿಸಲಾಗಿದ್ದು, ಪ್ರಾಯೋಗಿಕವಾಗಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯಪುರ ಸೂಚಿಸಿದ್ದಾರೆ.
ಮಂಗಳವಾರ ಘಟಕವನ್ನು ಪರಿಶೀಲಿಸಿ ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜೈವಿಕ ಅನಿಲ ಘಟಕಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಥಗಿತವಾಗಿದ್ದ ಜೈವಿಕ ಅನಿಲ ಘಟಕವನ್ನು ಉನ್ನತೀಕರಿಸಲಾಗಿದೆ. ಪ್ರತಿನಿತ್ಯ 5 ಟನ್ ಹಸಿ ತ್ಯಾಜ್ಯ ಸಂಸ್ಕರಿಸಲಾಗುತ್ತಿದೆ. ಇದರಿಂದ 300 ಕ್ಯೂಬಿಕ್ ಮೀಟರ್ ಜೈವಿಕ ಅನಿಲ ಉತ್ಪಾದಿಸಬಹುದು. ಹೀಗಾಗಿ, ಇದನ್ನು ವಿದ್ಯುತ್ ಆಗಿ ಪರಿವರ್ತಿಸಿ ಉದ್ಯಾನ ಹಾಗೂ ಬೀದಿ ದೀಪಗಳಿಗೆ ಬಳಸಿಕೊಳ್ಳಲಾಗುವುದು ಎಂದರು. ಮುಖ್ಯ ಅಭಿಯಂತರ ರಾಜೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ್ ಮತ್ತಿತರರಿದ್ದರು.
ಇದನ್ನೂ ಓದಿ: ತುಮಕೂರು ಎಸಿಗೆ ಸಂಸದ ಡಿ.ಕೆ.ಸುರೇಶ್ ಕ್ಲಾಸ್
ಅನಿಲ ಘಟಕ ವೀಕ್ಷಣೆ:
ಯಡಿಯೂರು ವಾರ್ಡ್ ವ್ಯಾಪ್ತಿಯ ಜೈವಿಕ ಅನಿಲ ಘಟಕವನ್ನು ಜಯರಾಮ್ ರಾಯಪುರ ವೀಕ್ಷಿಸಿದರು. ಈ ಘಟಕವು ಪ್ರತಿ ನಿತ್ಯ 5 ಟನ್ ಹಸಿ ತ್ಯಾಜ್ಯ ಸಂಸ್ಕರಣೆ ಮಾಡಲಿದ್ದು, 300 ಕ್ಯೂಬಿಕ್ ಮೀಟರ್ ಜೈವಿಕ ಅನಿಲ ಉತ್ಪತ್ತಿಯಾಗುತ್ತಿದೆ. ವಿದ್ಯುತ್ ಆಗಿ ಪರಿವರ್ತಿಸಿ ಉದ್ಯಾನ ಹಾಗೂ ಬೀದಿಬದಿ ವಿದ್ಯುತ್ ದೀಪಗಳ ಬಳಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.