

ಕೊಟ್ಟೂರು: ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದು, ತಾಲೂಕಿಗೊಂದು ಕ್ರೀಡಾಶಾಲೆ ಆರಂಭಿಸಿ ತರಬೇತಿ ನೀಡಿದರೆ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿಯಾಲಿದೆ ಎಂದು ಶಾಸಕ ನೇಮಿರಾಜ್ ನಾಯ್ಕ ಹೇಳಿದರು.
ಇದನ್ನೂ ಓದಿ:ಬಾಳ್ಕುದ್ರುವಿನಲ್ಲಿ ಚೌತಿ ಗಮ್ಮತ್ ಕ್ರೀಡಾಕೂಟ
ಹ್ಯಾಳ್ಯಾ ಗ್ರಾಮದಲ್ಲಿ ಗುರುವಾರ ಪೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಗರಿಬೊಮ್ಮನಹಳ್ಳಿಯಲ್ಲಿ ಕ್ರೀಡಾ ಶಾಲೆ ಆರಂಭಿಸಲು ಸರ್ಕಾರಕ್ಕೆ ಭೂಮಿ ನೀಡಿ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಕುರಿತು ಕ್ರೀಡಾ ಸಚಿವರಿಗೆ ಮನವಿ ಮಾಡಿದರೂ ಈವರೆಗೂ ಕ್ರೀಡಾಶಾಲೆ ಆರಂಭವಾಗಿಲ್ಲ. ಕ್ರೀಡೆಯಲ್ಲಿ ಸೋಲು-ಗೆಲವು ಸಾಮಾನ್ಯವಾಗಿದ್ದು, ಭಾಗವಹಿಸುವುದು ಮುಖ್ಯ ಎಂದರು.
ನಂತರ ಬಿಸಿಯೂಟ ಕೋಣೆ ಉದ್ಘಾಟಿಸಿ ಹೆಚ್ಚುವರಿ ಏಳು ಕೊಠಡಿಗಳ ನಿರ್ಮಾಣಕ್ಕೆ ಹಂತ ಹಂತವಾಗಿ ಅನುದಾನ ನೀಡಲಾಗುವುದು. ದೇವಾಲಯ ನಿರ್ಮಾಣಕ್ಕೆ 27 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಗ್ರಾಮದಲ್ಲಿ ಏಳು ಎಕರೆ ಪ್ರದೇಶದಲ್ಲಿ ಮೈದಾನವಿದ್ದು, ಕ್ರೀಡಾಂಗಣವಾಗಿ ಪರಿವರ್ತಿಸಬೇಕೆಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶ್ರೀಧರ ಎಸ್.ಒಡೆಯರ್ ಅವರು ಶಾಲೆಯ ಕಾಂಪೌಂಡ್ ಪಕ್ಕದಿಂದ ಹಗರಿ ಗಜಾಪುರವರೆಗೆ ರಸ್ತೆ ನಿರ್ಮಿಸಬೇಕೆಂದು ಮನವಿ ನೀಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಮಾಜಿ ಸದಸ್ಯ ಹರ್ಷವರ್ಧನ, ಗ್ರಾಪಂ ಅಧ್ಯಕ್ಷೆ ಬಿ.ಹಾಲಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಜಗದೀಶ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹುಲುಗಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಗ್ರಾಪಂ, ಎಸ್.ಡಿಎಂ.ಸಿ. ಸದಸ್ಯರು, ಗ್ರಾಮಸ್ಥರು ಇದ್ದರು.