ಕಚ್ಚಾರೇಷ್ಮೆ ಮಾರುಕಟ್ಟೆ ಆರಂಭಿಸಿ

ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಗೆ ಶಾಸಕ ಬಿ.ಎನ್.ರವಿಕುಮಾರ್ ಭೇಟಿ ನೀಡಿ ರೀಲರ್‌ಗಳ ಸಮಸ್ಯೆ ಆಲಿಸಿದರು.
09.09.2024 SDLP 01
ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಗೆ ಶಾಸಕ ಬಿ.ಎನ್.ರವಿಕುಮಾರ್ ಭೇಟಿ ನೀಡಿ ರೀಲರ್‌ಗಳ ಸಮಸ್ಯೆ ಆಲಿಸಿದರು.
Published on


ಶಾಸಕ ರವಿಕುಮಾರ್‌ಗೆ ರೀಲರ್‌ಗಳ ಒತ್ತಾಯ ಯೋಜನೆಗಳ ಜಾರಿಗೆ ಮನವಿ

ಶಿಡ್ಲಘಟ್ಟ: ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಹೊರಬರಲು ರೇಷ್ಮೆಗೂಡು ಮಾರುಕಟ್ಟೆಯಂತೆ ರೇಷ್ಮೆ ನೂಲಿಗೂ ಮಾರುಕಟ್ಟೆ ಆರಂಭಿಸಬೇಕು ಎಂದು ರೀಲರ್‌ಗಳು ಒತ್ತಾಯಿಸಿದ್ದಾರೆ.
ನಗರದ ರೇಷ್ಮೆಗೂಡು ಮಾರುಕಟ್ಟೆಗೆ ಸೋಮವಾರ ಭೇಟಿ ನೀಡಿದ್ದ ಶಾಸಕ ಬಿ.ಎನ್.ರವಿಕುಮಾರ್ ಅವರು ರೀಲರ್‌ಗಳ ಜತೆ ನಡೆಸಿದ ಕುಂದುಕೊರತೆ ಸಭೆಯಲ್ಲಿ ಹಲವಾರು ಮಂದಿ ರೀಲರ್‌ಗಳು ತಮ್ಮ ಅಳಲು ತೋಡಿಕೊಂಡರು.
ಸಿಲ್ಕ್ ರೀಲರ್ಸ್ ಪ್ರೊಡ್ಯೂಸರ್ಸ್ ಕಂಪೆನಿ ಅಧ್ಯಕ್ಷ ಫಾರೂಕ್ ಮಾತನಾಡಿ, ರೈತರು ರೇಷ್ಮೆಗೂಡನ್ನು ಮಾರುಕಟ್ಟೆಗೆ ತಂದು ಮಾರಿ ಹಣ ಪಡೆದು ವಾಪಸಾಗುತ್ತಾರೆ. ಆದರೆ, ರೀಲರ್‌ಗಳು ಮಧ್ಯವರ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದ್ದೇವೆ. ರೈತರು ಉತ್ಪಾದಿಸುವ ಕಚ್ಚಾರೇಷ್ಮೆಯನ್ನು ನೇರವಾಗಿ ಮಗ್ಗದವರಿಗೆ ಮಾರಿ ಹಣ ಪಡೆಯಲು ಅನುಕೂಲವಾಗುವಂತೆ ಕಚ್ಚಾ ರೇಷ್ಮೆ ಮಾರುಕಟ್ಟೆ ಆರಂಭಿಸಬೇಕು. ಆಗ ಮಾತ್ರ ರೀಲರ್‌ಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಲ್ಲವಾದರೆ ಉದ್ಯಮ ಕ್ಷೀಣಿಸುತ್ತದೆ ಎಂದರು.
ರೀಲರ್ ಜಿ.ರೆಹಮಾನ್ ಮಾತನಾಡಿ, ರೀಲರ್‌ಗಳಲ್ಲಿ ತಿಳಿವಳಿಕೆ ಕಡಿಮೆ, ಹಣವಂತರೂ ಅಲ್ಲ. ಅಧಿಕಾರಿಗಳು ರೀಲರ್‌ಗಳೊಂದಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ನೆರವಾಗಬೇಕು. ಇತ್ತೀಚೆಗೆ ಅಧಿಕಾರಿಗಳು ವಿವೇಕದಿಂದ ಕಾರ್ಯನಿರ್ವಹಿಸಿದ್ದಿದ್ದರೆ, ರೀಲರ್‌ಗಳಿಗೆ ಆದ ತೊಂದರೆ ತಪ್ಪಿಸಬಹುದಾಗಿತ್ತು ಎಂದರು.
ಸಮಸ್ಯೆ ಆಲಿಸಿದ ಶಾಸಕ ಬಿ.ಎನ್.ರವಿಕುಮಾರ್, ರೀಲರ್‌ಗಳು, ರೈತರು ಮತ್ತು ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿದಾಗ ಮಾತ್ರ ಎಲ್ಲರಿಗೂ ಅನುಕೂಲವಾಗುತ್ತದೆ. ಮೊದಲು ವೈ-ಫೈ ಸಮಸ್ಯೆ ಬಗೆಹರಿಸಲು
ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಒಟ್ಟಾರೆ ಮಾರುಕಟ್ಟೆಯಲ್ಲಿನ ಸಮಸ್ಯೆಗಳು ಬಗೆಹರಿಯಬೇಕು. ಪ್ರತಿದಿನ ರೀಲರ್‌ಗಳು ಮತ್ತು ರೈತರಿಂದ 1-2 ಲಕ್ಷ ರೂ. ಕಮಿಷನ್ ರೂಪದಲ್ಲಿ ಸಂಗ್ರಹವಾಗುತ್ತದೆ. ಆದರೂ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಹೊರ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ತಹಸೀಲ್ದಾರ್ ಬಿ.ಎನ್.ಸ್ವಾಮಿ, ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಎನ್.ಮಹದೇವಯ್ಯ, ಸಹಾಯಕ ನಿರ್ದೇಶಕರಾದ ತಿಮ್ಮರಾಜು, ಶ್ರೀಧರ್, ತಾಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಆನಂದಕುಮಾರ್, ಜೆಡಿಎಸ್ ಮುಖಂಡರಾದ ಬಂಕ್ ಮುನಿಯಪ್ಪ, ತಾದೂರು ರಘು ಮೇಲೂರು ಮಂಜುನಾಥ್ ಹಾಜರಿದ್ದರು.

ಬ್ಯಾಂಕ್ ಕೌಂಟರ್ ತೆರೆಯಲು ಮನವಿ
ರೀಲರ್‌ಗಳು ಮತ್ತು ರೈತರು ಕೋಟ್ಯಂತರ ರೂ. ವ್ಯವಹಾರ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಒಂದು ಕೌಂಟರ್ ಸ್ಥಾಪಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಪಾರದರ್ಶಕವಾಗಿ ಜಾರಿಗೊಳಿಸಬೇಕು ಮತ್ತು ನಿಜವಾದ ಫಲಾನುಭವಿಗಳಿಗೆ ತಲುಪಬೇಕು ಎಂದು ಶಾಸಕರು ಸೂಚಿಸಿದರು.

ವೈ-ಫೈ ವ್ಯವಸ್ಥೆ ಸಮರ್ಪಕವಾಗಿಲ್ಲ
ತಾಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್ ಮಾತನಾಡಿ, ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹಲವು ಸಮಸ್ಯೆಗಳಿದ್ದು, ರೀಲರ್‌ಗಳು ಮತ್ತು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಅಳವಡಿಸಿರುವ ವೈ-ಫೈ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವರ್ಚ್ಯುವಲ್ ಖಾತೆ ರದ್ದುಮಾಡಿ, ರೀಲರ್‌ಗಳ ಖಾತೆಯಿಂದ ಇ-ಪೇಮೆಂಟ್ ಮಾಡುವ ವ್ಯವಸ್ಥೆ ಮಾಡಬೇಕು. ರೇಷ್ಮೆಗೂಡು ಮಾರುಕಟ್ಟೆಯ ಇ-ಹರಾಜಿನಲ್ಲಿ ದಲ್ಲಾಳಿ ಕಾಟ ಹೆಚ್ಚಾಗಿದ್ದು, ನೈಜ ರೀಲರ್‌ಗಳು ಗೂಡು ಖರೀದಿಸಲು ಆಗುತ್ತಿಲ್ಲ. ಸರ್ಕಾರ 2023-24ನೇ ಸಾಲಿನಲ್ಲಿ ರೀಲರ್ಸ್‌ಗಳಿಗೆ 3 ಲಕ್ಷ ರೂ. ದುಡಿಮೆ ಬಂಡವಾಳವನ್ನು 5 ಲಕ್ಷ ರೂ.ಗಳಿಗೆ ಏರಿಸಿ ಆದೇಶಿಸಿದೆ. ಹಾಗಾಗಿ ಸಚಿವರು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಎಲ್ಲ ರೀಲರ್‌ಗಳಿಗೂ ದುಡಿಮೆ ಬಂಡವಾಳ ಸಿಗುವಂತೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಶಿಡ್ಲಘಟ್ಟದಲ್ಲಿ ಶೀಘ್ರ ಹೈಟೆಕ್ ಸಿಲ್ಕ್ ಮಾರ್ಕೆಟ್: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ 200 ಕೋಟಿ
ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳ ಸುಸಜ್ಜಿತ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ತಾಲೂಕಿನ ಯಲುವಳ್ಳಿ ಬಳಿ ಇರುವ ತೋಟಗಾರಿಕೆ ಇಲಾಖೆ ಜಾಗದಲ್ಲಿ ಹೂವಿನ ಮಾರುಕಟ್ಟೆ ನಿರ್ಮಿಸಲು ನೀಡಿರುವ 20 ಎಕರೆ ಜಮೀನನ್ನು ಪರಿಶೀಲನೆ ಹಾಗೂ ರೈತರೊಂದಿಗೆ ಸಂವಾದದ ಬಳಿಕ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಬಜೆಟ್‌ನಲ್ಲಿ ಜಿಲ್ಲೆಯ ಶಿಡ್ಲಘಟ್ಟದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಎರಡು ಹಂತಗಳಲ್ಲಿ
ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ಘೋಷಿಸಿತ್ತು. ಆದರೆ, ಭವಿಷ್ಯದ ಮತ್ತು ದೂರದೃಷ್ಟಿಯಿಂದ ಮತ್ತಷ್ಟು ಸೌಲಭ್ಯಗಳೊಂದಿಗೆ ಬೃಹತ್ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಮಾರುಕಟ್ಟೆ ನಿರ್ಮಾಣಕ್ಕೆ 75 ಕೋಟಿ ರೂಪಾಯಿಗಳನ್ನು ನಬಾರ್ಡ್ ನೆರವಿನಿಂದ ಹಾಗೂ 125 ಕೋಟಿ ರೂ.ಗಳನ್ನು ಸರ್ಕಾರದಿಂದ ಭರಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಆರ್ಥಿಕ ಇಲಾಖೆಯೂ ಒಪ್ಪಿಗೆ ಸಿಕ್ಕಿದೆ. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು.ಶಾಸಕ ಪ್ರದೀಪ್ ಈಶ್ವರ್ ಮತ್ತಿತರರು ಇದ್ದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಸ್ತಾಪವೇ ಇಲ್ಲ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಸ್ಪಷ್ಟಪಡಿಸಿದೆ. ವಿವಾದಿತ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ. ಸ್ಪಷ್ಟ ಬಹುಮತದ ಸರ್ಕಾರವನ್ನು ಬೀಳಿಸಲು ಬಿಜೆಪಿ ನಾಯಕರು ಯತ್ನಿಸಿ ವಿಫಲವಾಗಿದ್ದು ಈಗ ಹತಾಶ ಮನೋಭಾವನೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ.
- ಡಾ. ಎಂ.ಸಿ. ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net