ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ

25 mlv 1..
ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜು ಆವರಣದಿಂದ ಗುರುವಾರ ನಿಯೋಜನೆಗೊಂಡಿರುವ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ಮತಯಂತ್ರ ಮತ್ತು ಸಾಮಗ್ರಿಗಳನ್ನು ಪಡೆದು ತೆರಳಿದರು.
Published on

ಮಳವಳ್ಳಿ: ಲೋಕಸಭಾ ಚುನಾವಣೆಗೆ ಶುಕ್ರವಾರ ಮತದಾನ ನಡೆಯುವ ಹಿನ್ನೆಲೆಯಲ್ಲಿ ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ಪಟ್ಟಣದ ಶಾಂತಿ ಕಾಲೇಜು ಆವರಣದಿಂದ ಗುರುವಾರ ತಾಲೂಕಿನ 272 ಮತಗಟ್ಟೆಗಳಿಗೆ ಸಿಬ್ಬಂದಿ ಮತಯಂತ್ರ ಹಾಗೂ ಚುನಾವಣಾ ಸಾಮಗ್ರಿಗಳೊಂದಿಗೆ ವಾಹನಗಳಲ್ಲಿ ತೆರಳಿದರು.

ನಿಯೋಜನೆಗೊಂಡಿರುವ ಚುನಾವಣಾ ಸಿಬ್ಬಂದಿ ಸಾಮಗ್ರಿಗಳನ್ನು ಹಾಗೂ ಮತ ಯಂತ್ರಗಳನ್ನು ಪಡೆದು ಅವುಗಳನ್ನು ಕಾಲೇಜು ಆವರಣದಲ್ಲಿಯೇ ಪರಿಶೀಲನೆ ಮಾಡಿಕೊಂಡರು. ಚುನಾವಣಾಧಿಕಾರಿ ನಹೀದಾ ಜಮ್ ಜಮ್ ಮಾತನಾಡಿ, ಶಾಂತಿಯುತ ಮತದಾನಕ್ಕಾಗಿ ತಾಲೂಕು ಆಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ವಿವಿಧ ಹಂತದ ಮತಗಟ್ಟೆ ಅಧಿಕಾರಿಗಳಿಗಾಗಿ ಹಾಗೂ ತಾಲೂಕು ಮತದಾನ ಜಾಗೃತಿ ಸಮಿತಿ ಹಾಗೂ ನಾನಾ ಹಂತದ ಅಧಿಕಾರಿಗಳಿಗಾಗಿ 35 ಸಾರಿಗೆ ಸಂಸ್ಥೆಯ ಬಸ್‌ಗಳು, 19 ಜೀಪ್ ಹಾಗೂ 16 ಮ್ಯಾಕ್ಸಿಕ್ಯಾಬ್ ಬಳಸಿಕೊಳ್ಳಲಾಗಿದೆ ಎಂದರು.

ಶುಕ್ರವಾರ ನಡೆಯಲಿರುವ ಮತದಾನವನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಗಲಾಟೆ, ಅಕ್ರಮ ಮತದಾನ, ಶಾಂತಿಯುತ ಮತದಾನಕ್ಕೆ ಅಡ್ಡಿಪಡಿಸುವ ವ್ಯಕ್ತಿಗಳ ವಿರುದ್ಧ ಚುನಾವಣಾ ಆಯೋಗದ ನಿಯಮದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಹಸೀಲ್ದಾರ್ ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net