ಮತಯಂತ್ರ, ವಿವಿ ಪ್ಯಾಟ್‌ನೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ

25-KGLPHOTO-2,,
Published on

ಕೊಳ್ಳೇಗಾಲ: ಚಾಮರಾಜನಗರ ಲೋಕಸಭಾ ಕ್ಷೇತ್ರ ಚುನಾವಣೆ ಏ.26ರಂದು ನಡೆಯಲಿದ್ದು, ಚುನಾವಾಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಪಟ್ಟಣದ ಶ್ರೀಮಹದೇಶ್ವರ ಕಾಲೇಜಿನಿಂದ ಮತಯಂತ್ರ, ವಿ.ವಿ. ಪ್ಯಾಟ್ ಸೇರಿದಂತೆ ಚುನಾವಣಾ ಸಾಮಗ್ರಿಗಳನ್ನು ಪಡೆದು ಗುರುವಾರ ಮತಗಟ್ಟೆಗೆ ತೆರಳಿದರು.


ಬೆಳಗ್ಗೆ ಮಸ್ಟರಿಂಗ್ ಕೇಂದ್ರಗಳಿಗೆ ಮತಗಟ್ಟೆ ಅಧಿಕಾರಿಗಳು ಆಗಮಿಸಿ ಮತಯಂತ್ರ ಬಳಕೆ ಕುರಿತು ಕೊನೆಯ ಸುತ್ತಿನ ಮಾಹಿತಿ ಪಡೆದುಕೊಂಡರು. ಈ ವೇಳೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸಮರ್ಪಕವಾಗಿ ಚುನಾವಣೆ ಕೆಲಸ ಮಾಡುವಂತೆ ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸೂಚನೆ ನೀಡಿದರು.


ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 108056 ಪರುಷ ಮತದಾರರು, 111988 ಮಹಿಳಾ ಮತದಾರರು, 21 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 220065 ಮತದಾರಿದ್ದಾರೆ. ಚುನಾವಣೆಯಲ್ಲಿ ಮತದಾನ ಮಾಡಲು 241 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಈ ಪೈಕಿ 53 ಸೂಕ್ಷ್ಮ ಮತಗಟ್ಟೆಗಳಿದ್ದು ಇಲ್ಲಿಗೆ 53 ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕಮಾಡಲಾಗಿದೆ. ಇನ್ನು 124 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಸೇರಿದಂತೆ 5 ಸಿಬ್ಬಂದಿ ಕಾಯನಿರ್ವಹಿಸಲಿದ್ದಾರೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ.


ಕ್ಷೇತ್ರದಲ್ಲಿ ವಿಶೇಷವಾಗಿ 5 ಪಿಂಕ್ ಬೂತ್, 2 ಯೂತ್ ಬೂತ್, 2 ಹಸಿರು ಬೂತ್, 2 ಅನ್ನದಾತ ಬೂತ್‌ಗಳನ್ನು ತೆರೆಯಲಾಗಿದೆ. ಪಿಂಕ್‌ಬೂತ್‌ನಲ್ಲಿ ಎಲ್ಲ ಮಹಿಳಾ ಸಿಬ್ಬಂದಿಯನ್ನೇ ನಿಯೋಜನೆ ಮಾಡಲಾಗಿದೆ. ಯೂತ್ ಬೂತ್‌ನಲ್ಲಿ ಯುವಕರನ್ನೇ ನಿಯೋಜಿಸಲಾಗಿದೆ.


1250 ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳು ಪೋಲಿಂಗ್ ಬೂತ್‌ಗೆ ತೆರಳಲು 39 ಬಸ್‌ಗಳು, 8 ಜೀಪ್, 11 ಮಿನಿ ಬಸ್‌ಗಳ ಸೌಲಭ್ಯ ಒದಗಿಸಲಾಗಿತ್ತು. ಚುನಾವಣಾ ಸಿಬ್ಬಂದಿ ಮಧ್ಯಾಹ್ನದ ಊಟ ಮಾಡಿದ ನಂತರ ತಮ್ಮನ್ನು ನಿಯೋಜಿಸಿರುವ ಸ್ಥಳಕ್ಕೆ ವಾಹನಗಳ ಮೂಲಕ ತೆರಳಿದರು.


ಮತದಾರರಿಗೆ ಅಗತ್ಯ ಸೌಲಭ್ಯ: ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯವಿರುವ ಶೌಚಗೃಹ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಇನ್ನಿತರ ಮೂಲಸೌಕರ್ಯಗಳನ್ನು ಮಾಡಲಾಗಿದೆ.


465 ಪೊಲೀಸರ ನಿಯೋಜನೆ: ಚುನಾವಣಾ ಕರ್ತವ್ಯಕ್ಕೆ 1 ಡಿವೈಎಸ್ಪಿ, 3 ಸಿಪಿಐ, 10 ಪಿಎಸ್‌ಐ, 14 ಎಎಸ್‌ಐ, ಎಚ್‌ಸಿ ಮತ್ತು ಪಿಸಿ 19, ಎಚ್‌ಜಿ 159, ಡಿಎಆರ್ 22, ಕೆಎಸ್‌ಆರ್‌ಪಿ 23, ಸಿಆರ್‌ಪಿಎಫ್40 ಒಟ್ಟು 465 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net