ಏಷ್ಯಾದ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆ

03-10-rama-silk1
Published on

ಏಷ್ಯಾದ ದೊಡ್ಡ ರೇಷ್ಮೆ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆ

ಪ್ರತಿದಿನ ಅವಾಂತರಗಳಿಗೆ ಕಾರಣ

ಗಂಗಾಧರ್​ ಬೈರಾಪಟ್ಟಣ ರಾಮನಗರ
ರೇಷ್ಮೆನಾಡು ಖ್ಯಾತಿಯ ರಾಮನಗರ ರೇಷ್ಮೆ ಮಾರುಕಟ್ಟೆಗೆ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಇದರಿಂದಾಗಿ ಬೆಳೆಗಾರ ನಂಬಿಕೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾನೆ.
ಏಷ್ಯಾದಲ್ಲಿಯೇ ಅತಿದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಮೂಲಕವೇ ರೇಷ್ಮೆನಾಡು ಎಂದು ಖ್ಯಾತಿ ಪಡೆದುಕೊಂಡಿರುವ ರಾಮನಗರ ಮಾರುಕಟ್ಟೆಯಲ್ಲಿನ ಸಿಬ್ಬಂದಿ ಕೊರತೆ ಈ ಖ್ಯಾತಿಯನ್ನು ಕುಸಿಯುವಂತೆ ಮಾಡುತ್ತಿದೆ. ಈ ಬಗ್ಗೆ ಗಮನ ಹರಿಸಬೇಕಾದ ಸರ್ಕಾರಗಳು ಸಂಪೂರ್ಣವಾಗಿ ಕಡೆಗಣಿಸಿರುವ ಕಾರಣ ದಿನದಿಂದ ದಿನಕ್ಕೆ ರೈತರು ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಬೇಸರಗೊಳ್ಳುವಂತೆ ಮಾಡುತ್ತಿದೆ. 

ಸಿಬ್ಬಂದಿ ಕೊರತೆ

ರಾಮನಗರ ಮಾರುಕಟ್ಟೆ ಅತಿ ಹೆಚ್ಚು ರೇಷ್ಮೆ ವಹಿವಾಟು ನಡೆಸುವ ಮಾರುಕಟ್ಟೆಯಾಗಿದೆ. ಇಲ್ಲಿ ಪ್ರತಿದಿನ ಸರಾಸರಿ 35&40 ಟನ್​ ರೇಷ್ಮೆಗೂಡಿನ ಆವಕ ಇದೆ. ಆದರೆ ಇದನ್ನು ನಿಭಾಯಿಸಲು ಬೇಕಾದ ಸಿಬ್ಬಂದಿ ಇಲ್ಲದಿರುವುದು ಹಲವಾರು ಅವಾಂತರಗಳಿಗೆ ಪ್ರತಿದಿನ ಕಾರಣವಾಗುತ್ತಿದೆ. ಇಲ್ಲಿಗೆ ಡಿ ಗ್ರೂಪ್​ ಸೇರಿ ಒಟ್ಟು 60 ಹುದ್ದೆಗಳು ಮಂಜೂರಾಗಿದ್ದು, ಕೆಲಸ ನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 17 ಮಂದಿ ಎಂದರೆ ಅಚ್ಚರಿಪಡಬೇಕಿಲ್ಲ. ಇಲ್ಲಿರುವ ಉಪನಿರ್ದೇಶಕರ ಹುದ್ದೆಯೇ ಕಳೆದ ಎರಡು ವರ್ಷಗಳಿಂದ ಖಾಲಿ ಇದ್ದು, ಪ್ರಮುಖ ಹುದ್ದೆಗಳು ಭರ್ತಿಯಾಗಿ ವರ್ಷಗಳೇ ಕಳೆದಿವೆ. 
ಡಿಡಿ ಬರುತ್ತಿಲ್ಲ 
ಕಳೆದ ಎರಡು ವರ್ಷಗಳ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಉಪ ನಿರ್ದೇಶಕರು ಕೋಟ್ಯಂತರ ರೂ. ಅಕ್ರಮ ಎಸಗಿ ಅಮಾನತುಗೊಂಡಿದ್ದರು. ಆ ನಂತರ ರಾಮನಗರ ಮಾರುಕಟ್ಟೆಯ ಉಪನಿರ್ದೇಶಕ ಹುದ್ದೆ ಖಾಲಿಯೇ ಉಳಿದಿದೆ. ಆಗಾಗ ಕೆಲವರು ಪ್ರಭಾರವಾಗಿ ಬಂದು ಹೋಗುತ್ತಿರುವುದು ಬಿಟ್ಟರೆ ಖಾಯಂ ಉಪನಿರ್ದೇಶಕರು ನೇಮಕವಾಗಿಲ್ಲ. ಇದಕ್ಕೆ ಇಲ್ಲಿನ ಅವ್ಯವಸ್ಥೆ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 
ಆದಾಯದ ಮೂಲ
ರೇಷ್ಮೆ ಇಲಾಖೆಗೆ ರಾಮನಗರ ಮಾರುಕಟ್ಟೆ ಆದಾಯದ ಮೂಲವೇ ಆಗಿದೆ. ಪ್ರತಿದಿನ ಸರಾಸರಿ 35&40 ಟನ್​ ರೇಷ್ಮೆ ಗೂಡು ಹರಾಜಾಗುತ್ತದೆ. ಇದರಲ್ಲಿ ರೈತರು ಮತ್ತು ರೀಲರ್​ಗಳಿಂದ ತಲಾ ಶೇ.1ರಷ್ಟು ಹಣವನ್ನು ಕಮಿಷನ್​ ರೂಪದಲ್ಲಿ ಪಡೆಯಲಾಗುತ್ತದೆ. ಇದರ ಮೊತ್ತವೇ ಪ್ರತಿದಿನ ಸರಾಸರಿ 4 ಲಕ್ಷ ರೂ. ಆಗುತ್ತದೆ. ವಾರ್ಷಿಕವಾಗಿ  12&14 ಕೋಟಿ ರೂ.ವರೆಗೂ ಇಲಾಖೆಗೆ ಆದಾಯ ತಂದುಕೊಡುತ್ತದೆ. ಆದರೆ ಇಲ್ಲಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. 

ನೇಮಕಾತಿಯೇ ಇಲ್ಲ 

ರೇಷ್ಮೆ ಇಲಾಖೆ ಬಹುತೇಕ ಅತಿಹೆಚ್ಚು ಕಡೆಗಣಿಸಲ್ಪಟ್ಟ ಇಲಾಖೆ ಎಂದರೆ ತಪ್ಪಾಗಲಾರದು. ಇತರ ಇಲಾಖೆಗಳಲ್ಲಿ ಆಗಾಗ ಸಣ್ಣ&ಪುಟ್ಟ ನೇಮಕಾತಿಗಳು ನಡೆದಿವೆ. ಆದರೆ ಕಳೆದ 26 ವರ್ಷಗಳಿಂದ ರೇಷ್ಮೆ ಇಲಾಖೆಯಲ್ಲಿ ಒಂದೇ ಒಂದು ನೇಮಕಾತಿ ನಡೆದಿಲ್ಲ. ಇದರಿಂದಾಗಿ ಬಹುತೇಕ ರೇಷ್ಮೆ ಬೆಳೆಯುವ  ಜಿಲ್ಲೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ. ಇದರ ಪರಿಣಾಮ ರೇಷ್ಮೆ ಬಿತ್ತನೆ ಕೋಟಿ ಸೇರಿ ಹಲವಾರು ಟಕಗಳು ಮುಚ್ಚುತ್ತಿದ್ದು, ಇದರ ನಡುವೆಯೂ ರೇಷ್ಮೆ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ. 
ಕಣ್ಬಿಡುವುದೇ ಸರ್ಕಾರ 
ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ಮಂಚೂಣಿಯಲ್ಲಿದ್ದು, ಬೇಡಿಕೆಯ ಬಹುಭಾಗ ರೇಷ್ಮೆಯನ್ನು ರಾಜ್ಯ ಒಂದೇ ಪೂರೈಕೆ ಮಾಡುತ್ತಿದೆ. ಈ ಮೊದಲು ಕೇವಲ ಹಳೇ ಮೈಸೂರು ಭಾಗದ ಕೆಲವು ಜಿಲ್ಲೆಗಳಲ್ಲಿ ಇದ್ದ ರೇಷ್ಮೆ ಬೆಳೆ ಇತ್ತೀಚಿನ ವರ್ಷಗಳಲ್ಲಿ ಉತ್ತರ ಕರ್ನಾಟಕಕ್ಕೂ ವಿಸ್ತರಣೆ ಆಗಿದೆ. ಹಲವಾರು ಕುಟುಂಬಗಳ ಬದುಕಿನ ಆರ್ಥಿಕ ಮೂಲವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರ ರೇಷ್ಮೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ.
ರೇಷ್ಮೆ ಇಲಾಖೆ ಈಗ ರಾಜ್ಯವನ್ನು ವ್ಯಾಪಿಸಿದೆ. ಇದಕ್ಕೆ ಕಾಯಕಲ್ಪ ನೀಡಬೇಕಾದ ಸರ್ಕಾರ ಇಲಾಖೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಕೂಡಲೇ ಅಗತ್ಯ ಸಿಬ್ಬಂದಿ ನೇಮಕ ಮಾಡುವ ಮೂಲಕ ಇಲಾಖೆ ಮತ್ತು ಮಾರುಕಟ್ಟೆಯನ್ನು ಉಳಿಸಬೇಕಿದೆ.
 ಸಿ.ಪುಟ್ಟಸ್ವಾಮಿ, ಹಿರಿಯ ರೈತ ಮುಖಂಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net