ಸಿಬ್ಬಂದಿ ಕೊರತೆಯಿಂದ ಹೆಚ್ಚಿದ ಒತ್ತಡ

web123
Published on

ಅಂಗನವಾಡಿ ಕಾರ್ಯಕರ್ತೆಯರ ಅಳಲು ಆಯ್ಕೆ ಪಟ್ಟಿ ಪ್ರಕಟಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯ

ಗುಡಿಬಂಡೆ: ತಾಲೂಕಿನ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಇಬ್ಬರು ಮಾಡುವ ಕೆಲಸವನ್ನು ಒಬ್ಬರೇ ಮಾಡುವಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಆಯ್ಕೆಪಟ್ಟಿ ಪ್ರಕಟ ಮಾಡಬೇಕೆಂದು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರು ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿರುವ 130 ಅಂಗನವಾಡಿ ಕೇಂದ್ರಗಳ ಪೈಕಿ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ 16 ಅಂಗನವಾಡಿ ಸಹಾಯಕರ ಹುದ್ದೆಗಳು ಖಾಲಿ ಇವೆ. ಅನೇಕ ತಿಂಗಳಿಂದ ಸಿಬ್ಬಂದಿ ನೇಮಕಾತಿಯಾಗದೇ ಇಬ್ಬರು ಮಾಡುವ ಕೆಲಸವನ್ನು ಒಬ್ಬರೇ ಮಾಡಬೇಕಾಗಿದೆ. ಕೆಲಸದ ಒತ್ತಡ ಹೆಚ್ಚಾಗಿದ್ದು, ಖಾಲಿ ಹುದ್ದೆ ನೇಮಕಕ್ಕೆ ಶೀಘ್ರ ಆಯ್ಕೆ ಪ್ರಕ್ರಿಯೆ ನಡೆಸುವಂತೆ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ತಾಲೂಕಿನ ಎರಡು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಬೋಧನೆ ಮಾಡಲು ಕಾರ್ಯಕರ್ತರೇ ಇಲ್ಲ. ಉಳಿದ 16 ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರಿಲ್ಲದೇ ಅವರ ಕೆಲಸವನ್ನು ಕಾರ್ಯಕರ್ತರೇ ಮಾಡಬೇಕಾಗಿದೆ. ಇನ್ನು ಅಂಗನವಾಡಿಗೆ ಮಕ್ಕಳನ್ನು ಕರೆತರುವ ಕೆಲಸವೂ ಕಾರ್ಯಕರ್ತೆಯರ ಹೆಗಲಿಗೆ ಬಿದ್ದಿದೆ. ಮಕ್ಕಳನ್ನು ಕರೆತರಲು ಹೋದಾಗ ಕೇಂದ್ರದಲ್ಲಿ ಯಾರೂ ಇಲ್ಲದೇ ಸಮಸ್ಯೆಗೆ ಕಾರಣವಾಗಿದೆ ಎಂದು ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.

ಎರಡೂ ಕೆಲಸಕ್ಕೆ ಒಂದೇ ವೇತನ

ಕಳೆದ ಹಲವು ತಿಂಗಳ ಹಿಂದೆ ಕೆಲ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹಾಯಕಿಯರು ಮತ್ತು ಕಾರ್ಯಕರ್ತರು ವಯೋ ನಿವೃತ್ತಿಯಾಗಿದ್ದಾರೆ. ಅವರಿಂದ ತೆರವಾದ ಸ್ಥಾನಗಳು ಖಾಲಿ ಇದ್ದು, ಅವರಿಬ್ಬರ ಕೆಲಸವನ್ನೂ ಒಬ್ಬರೇ ಮಾಡುತ್ತಿದ್ದಾರೆ. ಆದರೆ, ಎರಡೂ ಕೆಲಸ ಮಾಡಿದರೂ ವೇತನ ಒಂದೇ ಸಿಗುತ್ತಿದೆ. ಆದ್ದರಿಂದ ಕೂಡಲೇ ಸಿಬ್ಬಂದಿ ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ.

ರಜೆ ಘೋಷಣೆ ಮಾಡುವ ಪರಿಸ್ಥಿತಿ

ಕೆಲ ಸರ್ಕಾರಿ ಕೆಲಸಗಳಿಗೆ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುತ್ತಿದ್ದು, ತರಬೇತಿ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯಲ್ಲಿ ಸಭೆ ಕರೆಯುತ್ತಾರೆ. ಅಂತಹ ಸಮಯದಲ್ಲಿ ಏಕ ಸಿಬ್ಬಂದಿ ಇರುವ ಕೇಂದ್ರಗಳಿಗೆ ರಜೆ ನೀಡಿ, ಸಭೆಗೆ ಹಾಜರಾಗಲಾಗುತ್ತಿದೆ.

"ಇಬ್ಬರ ಕೆಲಸ ಒಬ್ಬರೇ ಮಾಡುತ್ತಿದ್ದೇವೆ. ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗಿದೆ. ಕೆಲಸದ ಒತ್ತಡ ಹೆಚ್ಚಾಗಿದೆ. ಕೆಲವೊಮ್ಮೆ ಇಲಾಖೆಯಿಂದ ಸಭೆ ಕರೆದಾಗ ಭಾಗವಹಿಸಲು ಕೇಂದ್ರಕ್ಕೆ ರಜೆ ಹಾಕುವಂತಾಗಿದೆ. ಕೂಡಲೇ ಅಧಿಕಾರಿಗಳು ಸಿಬ್ಬಂದಿ ನೇಮಕ ಮಾಡಿ ನಮ್ಮ ಒತ್ತಡ ಕಡಿಮೆ ಮಾಡಬೇಕಾಗಿದೆ." - ಹೆಸರು ಹೇಳಲು ಇಚ್ಛಿಸದ ಅಂಗನವಾಡಿ ಸಹಾಯಕಿ "ಈಗಾಗಲೇ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಆಯ್ಕೆಗೆ ಅರ್ಜಿಗಳನ್ನು ಕರೆದಿದ್ದು, ಅವುಗಳನ್ನು ಜಿಲ್ಲಾಧಿಕಾರಿಗಳು ಆಯ್ಕೆ ಕಮಿಟಿ ರಚಿಸಿ ಆಯ್ಕೆ ಮಾಡುತ್ತಾರೆ. ಆಯ್ಕೆ ಪಟ್ಟಿ ಪ್ರಕಟ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ." - ಜಿ.ಎಂ.ರಫೀಕ್, ಸಿಡಿಪಿಒ, ಗುಡಿಬಂಡೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net