ಅರಣ್ಯ ರಕ್ಷಣೆಗೆ ಸಿಬ್ಬಂದಿ ಸಿದ್ಧತೆ

ಅರಣ್ಯ ರಕ್ಷಣೆಗೆ ಸಿಬ್ಬಂದಿ ಸಿದ್ಧತೆ
Published on

ಹಿರಿಕರ ರವಿ ಸೋಮವಾರಪೇಟೆ

ಬೆಲೆ ಬಾಳುವ ಗಿಡ ಮರಗಳು, ಅಪರೂಪದ ಪ್ರಾಣಿ ಪ್ರಭೇದಗಳಿರುವ ಮೀಸಲು ಅರಣ್ಯವನ್ನು ಕಾಳ್ಗಿಚ್ಚಿನಿಂದ ಕಾಪಾಡಬೇಕಾದ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದ್ದು, ಲಭ್ಯವಿರುವ ಸೌಲಭ್ಯಗಳಿಂದ ಅರಣ್ಯ ರಕ್ಷಣೆಗೆ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಸೋಮವಾರಪೇಟೆ ವಲಯದಲ್ಲಿ ಅರಣ್ಯಕ್ಕೆ ಯಡವನಾಡು, ಜೇನುಕಲ್ಲುಬೆಟ್ಟ, ನಿಡ್ತ ಮೀಸಲು ಅರಣ್ಯಗಳು ಇದ್ದು, 6,043 ಹೆಕ್ಟೇರ್ ಮೀಸಲು ಅರಣ್ಯವನ್ನು ಕಾಳ್ಗಿಚ್ಚಿನಿಂದ ರಕ್ಷಿಸಬೇಕಾದ ಅನಿವಾರ್ಯತೆ ಒದಗಿದೆ.

ಎಸಿಎಫ್, ಆರ್‌ಎಫ್‌ಒ, ಡಿಆರ್‌ಎಫ್‌ಒ, ಗಾರ್ಡ್‌ಗಳು, ವಾಚರ್‌ಗಳು, ಅರಣ್ಯ ರಕ್ಷಕರು, ಬೆಂಕಿ ವೀಕ್ಷಕರು, ಆರ್‌ಆರ್‌ಟಿ, ಇಟಿಎಫ್ ಸೇರಿದಂತೆ ಸುಮಾರು 60 ಜನ ಸಿಬ್ಬಂದಿಯಿಂದ ಅರಣ್ಯವನ್ನು ಬೆಂಕಿನಿಂದ ರಕ್ಷಿಸಬೇಕಾಗಿದೆ.

ಯಡವನಾಡು ಮೀಸಲು ಅರಣ್ಯದ ಸಜ್ಜಳ್ಳಿ, ಯಲಕನೂರು, ಕಾಜೂರು, ಕಾರೇಕೊಪ್ಪ, ನಿಡ್ತ ಮೀಸಲು ಅರಣ್ಯ ವ್ಯಾಪ್ತಿಯ ಬಾಣಾವಾರ, ಜೇನುಕಲ್ಲುಬೆಟ್ಟ ಸೇರಿದಂತೆ ಎಲ್ಲ ಕಡೆ ಅರಣ್ಯ ಸಂಪೂರ್ಣ ಒಣಗಿದ್ದು, ಅವುಗಳ ರಕ್ಷಣೆ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಮಾದಾಪುರ ಸಮೀಪದ ಕೋಟೆಬೆಟ್ಟ ಸರಹದ್ದಿನಲ್ಲಿ ಕಳೆದ ವರ್ಷವೂ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಕಾಜೂರು ಅರಣ್ಯದಲ್ಲೂ ಬೆಂಕಿ ಕಾಣಿಸಿಕೊಂಡಿತ್ತು. ಕೋಟೆಬೆಟ್ಟ ಪ್ರವಾಸಿಗರನ್ನು ಆಕರ್ಷಿಸುವ ಪ್ರಕೃತಿ ತಾಣವಾಗಿದ್ದು, ಪ್ರವಾಸಿಗರ ಸಂಖ್ಯೆಯೂ ಜಾಸ್ತಿಯಾಗಿರುತ್ತದೆ. ಹಟ್ಟಿಹೊಳೆ, ಮುಕ್ಕೊಡ್ಲು ಮಾರ್ಗವಾಗಿ ಅಥವಾ ಗರ್ವಾಲೆ ಗ್ರಾಮದ ಮಾರ್ಗವಾಗಿ ಬೆಟ್ಟವೇರಬಹುದು. ಕೋಟೆಬೆಟ್ಟ ಸರಹದ್ದಿನಲ್ಲಿ ಅರಣ್ಯದೊಂದಿಗೆ, 1200 ಎಕರೆ ಸಿ ಆ್ಯಂಡ್ ಡಿ ಜಾಗವಿದೆ. ಇದು ಕುರುಚಲು ಕಾಡು ಮತ್ತು ಹುಲ್ಲುಗಾವಲನ್ನು ಹೊಂದಿದೆ. ಪ್ರವಾಸಿಗರು ಸಿಗರೇಟು ಸೇದಲು ಬೆಂಕಿ ಕಡ್ಡಿ ಹಚ್ಚಿದಾಗ ಬೆಂಕಿ ಹೊತ್ತಿಕೊಂಡರೆ, ನಂತರ ನಂದಿಸಲು ಅಸಾಧ್ಯದ ಮಾತು.

ಪ್ರವಾಸಿಗರಿಗೆ ಕಾಳ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಅಲ್ಲದೆ ಮಾರ್ಚ್, ಏಪ್ರಿಲ್ ಮೇ ತಿಂಗಳಲ್ಲಿ ಚಾರಣಕ್ಕೆ ನಿಷೇಧ ಹೇರಬೇಕಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೋಮವಾರಪೇಟೆ ವಲಯದಲ್ಲಿ ನಿಡ್ತ ಮೀಸಲು ಅರಣ್ಯ 1843 ಹೆಕ್ಟೇರ್, ಯಡವನಾಡು ಮೀಸಲು ಅರಣ್ಯ 3300ಹೆ. ಜೇನುಕಲ್ಲು ಬೆಟ್ಟ 900 ಹೆ. ಅರಣ್ಯ ಪ್ರದೇಶವಿದೆ. ಇಲ್ಲಿ ಅಪರೂಪದ ಪಕ್ಷಿ, ಪ್ರಾಣಿ ಪ್ರಭೇದಗಳಿವೆ. ಜಿಂಕೆ, ಕಡವೆ, ಮೊಲ, ಚಿರತೆ, ಕಾಡಾನೆ, ಮುಂಗುಸಿ, ಉಡ, ಉರಗಗಳು, ಮುಳ್ಳುಹಂದಿ, ಕಾಡೆಮ್ಮೆ, ಕಾಡುಕೋಣ ಇನ್ನಿತರ ಪ್ರಾಣಿಗಳನ್ನು ಬೆಂಕಿಯಿಂದ ರಕ್ಷಿಸಬೇಕಾದ ಹೆಚ್ಚಿನ ಜವಾಬ್ದಾರಿ ಅರಣ್ಯ ಇಲಾಖೆಗೆ ಇದೆ.

ಯಡವನಾಡು ಮೀಸಲು ಅರಣ್ಯದ ಬಸವನಕಲ್ಲು ವಾಚ್ ಟವರ್‌ನಲ್ಲಿ 10 ಜನರ ತಂಡ ಕಾರ್ಯನಿರ್ವಹಿಸುತ್ತಿದೆ. ಬೈನಾಕ್ಯೂಲರ್ ಉಪಯೋಗಿಸಿ, ಸುತ್ತಲ ಮೀಸಲು ಅರಣ್ಯವನ್ನು ವೀಕ್ಷಿಸುತ್ತಿರುತ್ತಾರೆ. ಬೆಂಕಿ ಕಾಣಿಸಿಕೊಂಡರೆ, ಅಗ್ನಿಶಾಮಕದಳ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ. ನಂತರ ಇಲಾಖೆಯಲ್ಲಿರುವ ಎರಡೂ ವಾಹನಗಳಲ್ಲಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಬೇಕು. ಸಿಬ್ಬಂದಿ, ಅರಣ್ಯ ಸಮಿತಿ ಸದಸ್ಯರು, ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವ ಹೊತ್ತಿಗಾಗಲೇ ಬೆಂಕಿಯ ರುದ್ರನರ್ತನ ಪ್ರಾರಂಭವಾಗಿರುತ್ತದೆ.

ಕಳೆದ ವರ್ಷ ಯಡವನಾಡು ಮೀಸಲು ಅರಣ್ಯದ ಸ್ವಲ್ಪ ಭಾಗ ಕಾಳ್ಗಿಚ್ಚಿನಿಂದ ನಾಶವಾಗಿದೆ. ಪ್ರತಿವರ್ಷವೂ ಅನಾಹುತ ಸಂಭವಿಸುತ್ತಿದ್ದರೂ, ಅರಣ್ಯ ಇಲಾಖೆಯ ಮೇಲಧಿಕಾರಿಗಳು ವೈಜ್ಞಾನಿಕವಾಗಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿಲ್ಲ ಎಂಬುದೇ ಪ್ರಕೃತಿ ಪ್ರೇಮಿಗಳ ಕೊರಗೂ ಇದೆ.

ಅಮೂಲ್ಯ ಜೀವಸಂಕುಲ

ನಿಡ್ತ, ಮಾಲಂಬಿ, ಯಡವನಾಡು, ಜೇನಕಲ್ಲು ಬೆಟ್ಟದಲ್ಲಿ ಅಮೂಲ್ಯವಾದ ಜೀವಸಂಕುಲಗಳಿವೆ. ಬಿದಿರು ಒಂದಕ್ಕೊಂದು ಉಜ್ಜುವುದರಿಂದ ಬೆಂಕಿ ಉತ್ಪತ್ತಿಯಾಗುತ್ತದೆ. ವನ್ಯಮೃಗಗಳು ಕಲ್ಲಿನ ಮೇಲೆ ಜಿಗಿದಾಗ ಬೆಂಕಿ ಕಿಡಿಯಿಂದ ಬೆಂಕಿ ಹೊತ್ತಿಕೊಳ್ಳಬಹುದು. ತೇಗದ ಎಲೆಗಳು ಒಣಗಿ, ಉಷ್ಣಾಂಶ ಹೆಚ್ಚಾದಾಗ ಬೆಂಕಿ ಹೊತ್ತಿಕೊಂಡು ಕಾಳ್ಗಿಚ್ಚು ಉಂಟಾಗಬಹುದು. ಅಲ್ಲದೆ ಕಿಡಿಗೇಡಿಗಳು ಬೆಂಕಿ ಹಚ್ಚುವುದರಿಂದ, ಬೀಡಿ, ಸಿಗರೇಟಿನ ಕಿಡಿಯಿಂದಲೂ ಬೆಂಕಿ ಆವರಿಸುತ್ತದೆ ಎಂಬುದು ತಜ್ಞರು ಅಭಿಪ್ರಾಯಿಸಿದ್ದಾರೆ.

ತೇಗ, ಹೊನ್ನೆ, ಬೀಟೆ, ಶ್ರೀಗಂಧ, ನಂದಿ, ಅರಿಸಿನ ತೇಗ, ಬಿಲ್ವರ್, ಬೂರುಗ, ತಡಸಲು, ಕಡಲ, ದಿಂಡಿಗ, ಮತ್ತಿ, ಹಸಿರುಗಣೆ ಇಂತಹ ಅನೇಕ ಜಾತಿಯ ಮರಗಳು ಮೀಸಲು ಅರಣ್ಯದಲ್ಲಿವೆ.

ಅರಣ್ಯದೊಳಗಿರುವ ಅರಸಿಕೆರೆ, ಗಾರೇಕಟ್ಟೆಕೆರೆ, ಹೊನ್ನಕೆರೆ, ಸಜ್ಜಳ್ಳಿ ಕೆರೆಗಳಲ್ಲಿ ನೀರಿದ್ದು, ಅವುಗಳಲ್ಲಿ ಕಾಡುಪ್ರಾಣಿಗಳು ನೀರು ಕುಡಿಯುತ್ತಿವೆ. ಈ ಕಾರಣದಿಂದ ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳು ವಲಸೆ ಹೋಗಿಲ್ಲ. ಈ ಕೆರೆಗಳ ನೀರನ್ನು ಬೆಂಕಿ ನಂದಿಸಲು ಉಪಯೋಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದೆರಡು ಇಂಚು ಮಳೆ ಸುರಿದರೆ, ಲಂಟಾನ, ಮರಗಿಡಗಳು ಚಿಗುರಿ, ಕಾಳ್ಗಿಚ್ಚು ಆತಂಕದಿಂದ ಬಚಾವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net