ಧನಾತ್ಮಕ ಚಿಂತನೆಗಳಿಂದ ಬದಲಾವಣೆ ಸಾಧ್ಯ, ಫಿಲೋಮಿನಾ ಫ್ಯಾಕುಲಾ 2022 ವ್ಯವಹಾರ ಆಡಳಿತ ರಾಷ್ಟ್ರಮಟ್ಟದ ಮೇಳದ ಸಮಾರೋಪದಲ್ಲಿ ಹಾಸ್ಯನಟ ಅರವಿಂದ ಬೋಳಾರ್

ptr_22 aug kannada
ಫಿಲೋಮಿನಾ ಫ್ಯಾಕುಲಾ 2022 ವ್ಯವಹಾರ ಆಡಳಿತ ರಾಷ್ಟ್ರಮಟ್ಟದ ಮೇಳದ ಸಮಾರೋಪದಲ್ಲಿ ತುಳು ಚಿತ್ರರಂಗದ ಹಾಸ್ಯ ನಟ ಅರವಿಂದ ಬೋಳಾರ್ ಮಾತನಾಡಿದರು.
Published on

ಪುತ್ತೂರು: ಧನಾತ್ಮಕ ಚಿಂತನೆಗಳು ಒಂದೆಡೆ ಸೇರಿ ಕಾರ್ಯರೂಪಕ್ಕೆ ಬಂದಾಗ ರಚನಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಶಿಕ್ಷಣ ಸಂಸ್ಥೆಯ ಸರ್ವಾಂಗೀಣ ಪ್ರಗತಿಯ ಉದ್ದೇಶದಿಂದ ಪ್ರತಿಯೊಬ್ಬ ಪಾಲುದಾರನೂ ಬದ್ಧತೆ ಮತ್ತು ಪರಿಶ್ರಮದಿಂದ ಕಾರ್ಯನಿರ್ವಹಿಸುವ ಮನೋಗುಣ ಹೊಂದಿರಬೇಕು ಎಂದು ತುಳು ಚಿತ್ರರಂಗದ ಹಾಸ್ಯ ನಟ ಅರವಿಂದ ಬೋಲಾರ್ ಹೇಳಿದರು.
ಸಂತಫಿಲೋಮಿನಾ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ನಡೆದ ರಾಷ್ಟ್ರಮಟ್ಟದ ವ್ಯವಹಾರ ಆಡಳಿತ ಮೇಳ ಮತ್ತು ಸ್ಪರ್ಧೆಯ ಸಮಾರೋಪದಲ್ಲಿ ಮಾತನಾಡಿದರು.
ಒಂದು ಸಂಸ್ಥೆಯಲ್ಲಿ ಉತ್ತಮವಾದ ಸಂಗತಿಗಳು ಜರಗಬೇಕಾದರೆ ಸಹೃದಯಿ ಚಿಂತಕರು ಬಹಳಷ್ಟು ಅಗತ್ಯವಿದೆ. ಈ ಸಂಸ್ಥೆಯಲ್ಲಿ ನಡೆಯುತ್ತಿರುವ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲು ಪ್ರತಿಯೊಬ್ಬರೂ ಸಹಕರಿಸುವ ಅಗತ್ಯವಿದೆ ಎಂದರು.
ಕ್ಯಾಂಪಸ್ ನಿರ್ದೇಶಕ ಸ್ಟಾನಿ ಪಿಂಟೋ ಮಾತನಾಡಿ, ಉದ್ಯಮ ರಂಗದಲ್ಲಿ ಹಲವು ಅವಕಾಶಗಳಿವೆ. ಸವಾಲುಗಳನ್ನು ಎದುರಿಸುವ ಛಲ ಮತ್ತು ಪರಿಶ್ರಮದ ದುಡಿಮೆ ನಡೆಸಿದರೆ ಯಶಸ್ಸು ಲಭ್ಯ. ಹೊಸ ವಿಷಯಗಳಿಗೆ, ಬದಲಾವಣೆಗಳಿಗೆ ನಾವು ತೆರೆದುಕೊಳ್ಳಬೇಕು ಮತ್ತು ಇದರಿಂದ ಹೊಸ ಅವಕಾಶಗಳು ಸಿಗುತ್ತವೆ ಎಂದರು.
ಪ್ರಾಂಶುಪಾಲ ಡಾ. ಎಂಟೋನಿ ಪ್ರಕಾಶ್ ಮಂತೆರೋ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿವಿ ಪರೀಕ್ಷೆಯಲ್ಲಿ ರ‌್ಯಾಂಕ್ ಗಳಿಸಿದ ಮೈತ್ರಿ, ರಷಿಯಾ ರೈ ಮತ್ತು ಶ್ರೇಯಾ ಅವರನ್ನು ಮತ್ತು ಡಾಕ್ಟರೇಟ್ ಪದವಿ ಪಡೆದ ಬಿಬಿಎ ವಿಭಾಗ ಮುಖ್ಯಸ್ಥ ಡಾ.ರಾಧಾಕೃಷ್ಣ ಗೌಡ ಅವರನ್ನು ಸನ್ಮಾನಿಸಲಾಯಿತು. ಮೇಳದ ಸಂಯೋಜಕ ವಿದ್ಯಾರ್ಥಿ ಪ್ರಖ್ಯಾತ್ ರೈ, ಪ್ರಾಧ್ಯಾಪಕ ಅಭಿಷಕ್ ಸುವರ್ಣ ಉಪಸ್ಥಿತರಿದ್ದರು.
ಶಟರ್ ಬಾಕ್ಸ್ ಖ್ಯಾತಿಯ ಸಚಿನ್ ಶೆಟ್ಟಿ ಭಾಗವಹಿಸಿದ್ದು ಮೇಳದ ದೊಡ್ಡ ಆಕರ್ಷಣೆಯಾಗಿತ್ತು. ಬೋಲಾರ್ ಹಾಗೂ ಸಚೀನ್ ವಿದ್ಯಾರ್ಥಿಗಳನ್ನು ತಮ್ಮ ಮಾತಿನ ಪ್ರೌಢಿಮೆಯಿಂದ ಮೋಡಿ ಮಾಡಿ ಹಾಸ್ಯ, ಮನೋರಂಜನೆಯ ಸಿಂಚನವನ್ನೇ ಮಾಡಿದರು.
ಸ್ಪರ್ಧೆಯಲ್ಲಿ ಕೆನೆರಾ ಕಾಲೇಜ್ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಮತ್ತು ವಿವೇಕಾನಂದ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಬಿಬಿಎ ವಿಭಾಗ ಮುಖ್ಯಸ್ಥ ಡಾ.ರಾಧಾಕೃಷ್ಣ ಗೌಡ ಸ್ವಾಗತಿಸಿದರು. ಪ್ರಖ್ಯಾತ್ ರೈ ವಂದಿಸಿದರು, ಹರ್ಷಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net