ಜಿಲ್ಲೆಯ 4 ಶಾಲೆ ಶೂನ್ಯ ಸಾಧನೆ

sslc_dc
Published on

ತುಮಕೂರು: ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಎರಡು ಹಾಗೂ ತುಮಕೂರು ಶೈಕ್ಷಣಿಕ ಜಿಲ್ಲೆಯ 2 ಶಾಲೆಗಳು ಶೂನ್ಯ ಸಾಧನೆ ಮಾಡಿವೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲೂಕಿನ ಕೇಲಾರ್ಲಹಳ್ಳಿ ರಾಷ್ಟ್ರಪ್ರಗತಿ ಹೈಸ್ಕೂಲ್, ಕೊರಟಗೆರೆ ತಾಲೂಕಿನ ಶ್ರೀ ವಿವೇಕಾನಂದ ರೂರಲ್ ಹೈಸ್ಕೂಲ್‌ಹಾಗೂ ತುಮಕೂರು ಶೈಕ್ಷಣಿಕ ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಕೆಂಪೇಗೌಡ ಪ್ರೌಢಶಾಲೆ, ಭಾರತೀಯ ರೆಡ್‌ಕ್ರಾಸ್‌ನ ಕಿವುಡ ಮತ್ತು ಮೂಗರ ಶಾಲೆ ಶೂನ್ಯ ಸಾಧನೆ ಮಾಡಿ ಅನಪೇಕ್ಷಿತ ದಾಖಲೆ ಬರೆದಿವೆ.

ಪಾತಾಳಕ್ಕೆ ಕುಸಿದ ಮಧುಗಿರಿ: ಕಳೆದ ಬಾರಿ ಶೇ.93.23ರಷ್ಟು ಫಲಿತಾಂಶ ಪಡೆದು 9ನೇ ಸ್ಥಾನಗಳಿಸಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಶೇ. 62.44 ಫಲಿತಾಂಶಗಳಿಸಿ 30ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟಾರೆ ಫಲಿತಾಂಶ ಶೇ.30.79ರಷ್ಟು ಕಡಿಮೆ ಆಗಿದೆ. ಇನ್ನೂ ತುಮಕೂರು ಶೈಕ್ಷಣಿಕ ಜಿಲ್ಲೆ 20ನೇ ಸ್ಥಾನದಿಂದ 16ನೇ ಸ್ಥಾನಕ್ಕೇ ಜಿಗಿದಿದೆಯಾದರು ಸರಾಸರಿ ಫಲಿತಾಂಶದಲ್ಲಿ ಶೇ.14.27ರಷ್ಟು ಕುಸಿದಿರುವುದು ಶೈಕ್ಷಣಿಕ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಿದ ಪರಿಣಾಮ ಫಲಿತಾಂಶದ ಮೇಲೆ ನೇರವಾಗಿ ಬಿದ್ದಿದೆ. ಸಾಮೂಹಿಕ ನಕಲು ಮಾಡಲು ಅವಕಾಶವಾಗದೆ ಇರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಬಿಇಒಗೆ ಪರೀಕ್ಷೆ ಸಮಯ ಗೊತ್ತಿರಲಿಲ್ಲ !! ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭದ ಮೊದಲದಿನವೇ ನಗರದ ಎಂಪ್ರೆಸ್ ಸರ್ಕಾರಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸಂಸ್ಕೃತ ಭಾಷೆಯ ಪ್ರಶ್ನೆಪತ್ರಿಕೆ 15 ನಿಮಿಷ ತಡವಾಗಿ ನೀಡಲಾಗಿತ್ತು. ಬೆಳಗ್ಗೆ 10.30ಕ್ಕೆ ಪರೀಕ್ಷೆ ಅರಂಭವಾಗಿದ್ದು ಪ್ರಶ್ನೆ ಪತ್ರಿಕೆಯನ್ನು 15 ನಿಮಿಷ ಮುಂಚಿತವಾಗಿ ನೀಡಬೇಕಿದ್ದರೂ ಪರೀಕ್ಷಾ ಕೇಂದ್ರದಲ್ಲಿನ ಉದಾಸೀನತೆಯಿಂದ 15 ನಿಮಿಷ ತಡವಾಗಿ ಪ್ರಶ್ನೆಪತ್ರಿಕೆ ನೀಡಿರುವುದು ಖುದ್ದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಭೇಟಿ ನೀಡಿದಾಗ ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಜಿಲ್ಲಾಧಿಕಾರಿ ಪರೀಕ್ಷಾ ಕೇಂದ್ರದಲ್ಲಿಯೇ ಇದ್ದ ತುಮಕೂರು ತಾಲೂಕು ಬಿಇಒ ಡಾ.ಸೂರ್ಯಕಲಾ ಅವರನ್ನು ಈ ವೇಳೆ ತರಾಟೆಗೆ ತೆಗೆದುಕೊಂಡಿದ್ದರಲ್ಲದೆ, ‘ಎಷ್ಟು ಗಂಟೆಗೆ ಪ್ರಶ್ನೆ ಪತ್ರಿಕೆ ನೀಡಬೇಕಿತ್ತು? ಇವತ್ತು ಯಾವ ವಿಷಯ ಗೊತ್ತಾ ? ಎಂದು ಪ್ರಶ್ನಿಸಿದ್ದಾರೆ. ಸಮಯ ನನಗೆ ಗೊತ್ತಿಲ್ಲ, ಶಿಕ್ಷಕರನ್ನು ಕೇಳಿವಿವರಣೆ ನೀಡುವುದಾಗಿ ಉತ್ತರ ನೀಡಿದ ಬಿಇಒಗೆ ಯಾವ ವಿಷ್ಯ ಅಂತಾ ಕೂಡ ಗೊತ್ತಿರಲಿಲ್ಲ. ಅಕ್ಷರಷಃ ಜಿಲ್ಲಾಧಿಕಾರಿ ಶುಭಕಲ್ಯಾಣ್ ಶಾಕ್ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net