ಮತ್ತೆ ಅತಂತ್ರವಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ: ಸುಪ್ರೀಂಕೋರ್ಟ್​ಗೆ ಮೇಲ್ಮನವಿ

sslc
Published on

ಬೆಂಗಳೂರು: ಕರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್​ಗೆ ಮಂಗಳವಾರ ಮೇಲ್ಮನವಿ ಸಲ್ಲಿಸಲಾಗಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ಹಗ್ಗಜಗ್ಗಾಟದಂತಾಗಿದೆ.

ಬೆಳಗಾವಿ ಮೂಲದ ರಾಜಶ್ರೀ ಎಂಬುವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈಗ ಪರೀಕ್ಷೆ ನಡೆಸುವುದು ತುಂಬಾ ಅಪಾಯಕಾರಿಯಾಗಲಿದೆ.ಇದರ ಜತೆಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು‌ ಮತ್ತು ಸಿಬ್ಬಂದಿಗಳಿಗೆ ತೊಂದರೆಯಾಗಲಿದೆ. ಉತ್ತಮ ಆರೋಗ್ಯ ಪಡೆಯುವುದು ಸಂವಿಧಾನದ ಹಕ್ಕು. ಶೈಕ್ಷಣಿಕ ಸಾಲಿನ ಹಿಂದಿನ ಪೂರ್ವ ಸಿದ್ಧತಾ ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಹಾಗೂ ಆಂತರಿಕ ಮಾರ್ಕ್ಸ್ ಆಧಾರದ ಮೇಲೆ ವಿಧ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಅರ್ಹತೆ ನೀಡಬೇಕು. ಹಾಗಾಗಿ ಪರೀಕ್ಷೆ ರದ್ದು‌ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೂ ಜೂನ್ 25 ರಿಂದ ನಡೆಯುವ ಪರೀಕ್ಷೆ ತಡೆ ನೀಡಲು ಮನವಿ ಮಾಡಲಾಗಿದೆ. ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿದ ತಮಿಳುನಾಡಿಗೆ ಶಿಕ್ಷಣ ಸಚಿವರ ಟಾಂಗ್​

ಪರೀಕ್ಷೆ ನಡೆಸಲು ಹೈಕೋರ್ಟ್ ಈ ಹಿಂದೆ ನಿರ್ದೇಶನ ನೀಡಿತ್ತು. ಅದರಂತೆ ಶಿಕ್ಷಣ ಇಲಾಖೆ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಜೂನ್​ 25ರಿಂದ ಪರೀಕ್ಷೆ ಆರಂಭವಾಗಬೇಕಿದೆ. ಇದೀಗ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿರುವುದು ಮತ್ತೊಮ್ಮೆ ಗೊಂದಲಕ್ಕೆ ಕಾರಣವಾಗಿದೆ.

ಈಗಾಗಲೇ ತಮಿಳುನಾಡು, ಪಾಂಡಿಚೇರಿ(ಕೇಂದ್ರಾಡಳಿತ ಪ್ರದೇಶ) ಸೇರಿದಂತೆ ಕೆಲ ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ರಾಜ್ಯದಲ್ಲೂ ಸಹ ಪರೀಕ್ಷೆ ರದ್ದತಿಗೆ ತೀವ್ರ ಒತ್ತಾಯಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಕಾ? ಬೇಡ್ವಾ? ಎಂಬ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಸಚಿವರು

ಇನ್ನೊಂದೆಡೆ ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಶಿಕ್ಷಣ ಸಚಿವರು ಜೂನ್​ 25ರಿಂದ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ತಜ್ಞರ ಅಭಿಪ್ರಾಯ ಪಡೆದು ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಲ್ಲಿ ಗೊಂದಲವನ್ನುಂಟು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net