ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ

FotoJet (1)
Published on

ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾಹಿತಿ 3,926 ವಿದ್ಯಾರ್ಥಿಗಳು ನೋಂದಣಿ 13 ಕೇಂದ್ರಗಳ ಗುರುತು ನಿಷೇಧಾಜ್ಞೆ ಜಾರಿ

ಗೌರಿಬಿದನೂರು: ಗೌರಿಬಿದನೂರು ಹಾಗೂ ಮಂಚೇನಹಳ್ಳಿ ತಾಲೂಕು ವ್ಯಾಪ್ತಿಯ 13 ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 3,926 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಾ.21ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ. 1,893 ಗಂಡು, ಹಾಗೂ 2,033 ಹೆಣ್ಣು ಮಕ್ಕು ಸೇರಿ ಒಟ್ಟು 3,926 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಮಂಚೇನಹಳ್ಳಿಯಲ್ಲಿ 2, ಅಲ್ಲಿಪುರದಲ್ಲಿ 1, ಗೌರಿಬಿದನೂರು ನಗರದಲ್ಲಿ 5, ವಾಟದಹೊಸಹಳ್ಳಿ 2, ತೊಂಡೇಬಾವಿ, ಡಿ.ಪಾಳ್ಯ ತಲಾ ಒಂದು ಸೇರಿ ಒಟ್ಟು 13 ಕೇಂದ್ರಗಳಲ್ಲಿ 6 ದಿನ ಪರೀಕ್ಷೆ ನಡೆಯಲಿವೆ. ಎಲ್ಲ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಅದಕ್ಕೆಂದೇ 400 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ನರ್ಸ್, ಆಶಾ ಕಾರ್ಯಕರ್ತೆಯನ್ನು ನಿಯೋಜಿಸಲಾಗುವುದು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸಮೂರ್ತಿ ಮಾತನಾಡಿ, ಮಕ್ಕಳಿಗೆ ತೊಂದರೆಯಾಗದಂತೆ ಡೆಸ್ಕ್, ಕುಡಿಯುವ ನೀರು, ಶೌಚಗೃಹ, ಕೊಠಡಿಗಳು ಸೇರಿ ಅಗತ್ಯ ಮೂಲ ಸೌಲಭ್ಯ ಒದಗಿಸಲಾಗುವುದು. ಗುಂಪು ಅಧ್ಯಯನ, 20 ಅಂಶಗಳ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸಲಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ ತಾಲೂಕು ಫಲಿತಾಂಶ 5ನೇ ಸ್ಥಾನದಲ್ಲಿತ್ತು. ಈ ಬಾರಿ ಪ್ರಥಮ ಅಥವಾ ದ್ವಿತೀಯ ಸ್ಥಾನದ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರಮ ವಹಿಸಿದ್ದೇವೆ ಎಂದರು.

ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಚೆನ್ನಪ್ಪ ಎಸ್.ಗೌಡ ನಾಯ್ಕರ್, ಶಿಶು ಯೋಜನಾಧಿಕಾರಿ ರವಿ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

ಮೇಳ್ಯಾ ಭಾಗಕ್ಕೆ ಬಸ್ ವ್ಯವಸ್ಥೆ

ಪರೀಕ್ಷೆ ಸಂದರ್ಭದಲ್ಲಿ ಮಕ್ಕಳ ಓದಿಗೆ ತೊಂದರೆಯಾಗಬಾರದೆಂದು ವಿದ್ಯುತ್ ಕಡಿತಗೊಳಿಸದಂತೆ ಬೆಸ್ಕಾಂಗೆ ಮನವರಿಕೆ ಮಾಡಲಾಗಿದೆ. ಪರೀಕ್ಷೆಗೆ ಎದುರಿಸುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಪ್ರವೇಶ ಪತ್ರ ತೋರಿಸಿದರೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಮೇಳ್ಯಾ ಭಾಗದಲ್ಲಿ ಬಸ್‌ಗಳ ಕೊರತೆಯಿರುವುದರಿಂದ ಪರೀಕ್ಷಾ ದಿನಗಳಂದು ಆ ಭಾಗಕ್ಕೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೆ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ 144 ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. 200 ಮೀ. ವ್ಯಾಪ್ತಿಯಲ್ಲಿ ಜೆರಾಕ್ಸೃ್ ಅಂಗಡಿಗಳನ್ನು ಮುಚ್ಚಬೇಕು, ಜನ ಜಂಗುಳಿ ಸೇರಬಾರದು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ಇನ್ನಿತರ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಹೇಶ್ ಎಸ್.ಪತ್ರಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net