

ತುಮಕೂರು: ಉದ್ಯೋಗ ಅರಸಿ ಬೇರೆ ಕಂಪನಿಗಳಿಗೆ ಎಡತಾಕುವುದಕ್ಕಿಂತ ಸ್ವಂತ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಚಿಂತನೆ ಮಾಡಿ ಎಂದು ಸಾಹೇ ವಿಶ್ವ ವಿದ್ಯಾನಿಲಯದ ಕುಲಸಚಿವ ಡಾ.ಎಂ.ಝಡ್.ಕುರಿಯನ್ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನಲ್ಲಿ ಸೋಮವಾರ ಹಳೇ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸೇತುಬಂಧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಕೇವಲ ಉದ್ಯೋಗವನ್ನು ಧಕ್ಕಿಸಿಕೊಳ್ಳುವುದಷ್ಟೇ ಅಲ್ಲ, ಆದಷ್ಟು ಬೇಗ ಸ್ವಂತ ಉದ್ಯಮವನ್ನು ಆರಂಭಿಸಬೇಕು. ಆಗ ಮಾತ್ರ ಅವರ ಜೀವನ ಸುಂದರವಾಗಿರಲಿದೆ ಎಂದರು.
ನಾವು ಮಾಡುತ್ತಿರುವ ಕೆಲಸಗಳಲ್ಲಿ ಅಡ್ಡಿ ಆತಂಕಗಳು ಬಂದೇ ಬರುತ್ತವೆ. ಇದೆಲ್ಲವನ್ನು ಸರಿ ಪಡಿಸಿಕೊಂಡು ಮುಂದೆ ಹೋದಾಗ ಮಾತ್ರ ನಾವು ಯಶಸ್ಸನ್ನು ಪಡೆಯುತ್ತೇವೆ ಎಂದು ಟೈಟಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಿ.ಎಲ್.ಪ್ರಸಾದ್ ತಿಳಿಸಿದರು.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗ ನಂಜುಂಡಪ್ಪ ಮಾತನಾಡಿ, ಮನುಷ್ಯನನ್ನು ಮಾನವರನ್ನಾಗಿ ಮಾಡುವುದಕ್ಕೆ ಶಿಕ್ಷಣ ತುಂಬಾ ಅತ್ಯಗತ್ಯವಾಗಿದೆ. ಇಂದಿನ ದಿನಗಳಲ್ಲಿ ವೃತ್ತಿಪರ ಶಿಕ್ಷಣದಿಂದ ಉದ್ಯೋಗ ದೊರೆಯುತ್ತದೆ. ಆದರೆ, ಮನುಷ್ಯನಿಗೆ ಮುಖ್ಯವಾಗಿ ಬೇಕಿರುವುದು ಹೃದಯವಂತಿಕೆಯ ಶಿಕ್ಷಣ. ಇದು ಕೇವಲ ಸಾಹಿತ್ಯದ ಅಧ್ಯಯನದಿಂದ ಮಾತ್ರ ಗಳಿಸಲು ಸಾಧ್ಯ. ಸಾಹಿತ್ಯದ ಶಿಕ್ಷಣವನ್ನು ಪಡೆಯದೇ ಹೋದರೆ ನಾವು ಮನುಷ್ಯರಾಗಿ ಜನಿಸಿದ್ದೇ ವ್ಯರ್ಥ ಎಂದರು.
ಸೇತುಬಂಧ ಕಾರ್ಯಕ್ರಮ ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಂಬಂಧವನ್ನು ವೃದ್ಧಿಸುವ ಉದ್ದೇಶ ಹೊಂದಿದೆ. ಕಾಲೇಜಿನಲ್ಲಿ ಅತೀ ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುತ್ತಿದ್ದು ಇವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಸ್ಥೆಯಿಂದ ಹಲವು ಶೈಕ್ಷಣಿಕ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಎಸ್ಎಸ್ ಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್ ರವಿಪ್ರಕಾಶ್ ಹೇಳಿದರು.
ವಿವಿಧ ವಿಭಾಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಲೇಜಿನ ವತಿಯಿಂದ ಹಳೆೇ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಎಸ್ಎಸ್ಐಟಿ ಕಾಲೇಜಿನ ಮಾಜಿ ಆಡಳಿತಾಧಿಕಾರಿ ಡಾ. ವೈ.ಎಂ.ರೆಡ್ಡಿ, ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ವೀರಯ್ಯ, ಅಕಾಡೆಮಿ ಡೀನ್ ಡಾ. ಎಸ್.ರೇಣುಕಲತಾ, ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಡಾ. ವಿ.ರವಿರಾಮ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಎಸ್.ಎಚ್.ಜೀವಿತ, ಜಿ.ಎಲ್.ಸ್ವರ್ಣಲತಾ ಮತ್ತಿತರರು ಉಪಸ್ಥಿತರಿದ್ದರು.