

ಬಾಗಲಕೋಟೆ: ಪ್ರತಿಯೊಂದು ಅದೃಷ್ಟದಿಂದಲೇ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತೇವೆ ಎಂಬ ಭ್ರಮೆಯಿಂದ ಹೊರ ಬರಬೇಕು. ಶ್ರಮದ ಪ್ರತಿಫಲದಿಂದ ಅದೃಷ್ಟ ಖುಲಾಯಿಸುತ್ತದೆ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ ಡೆಪ್ಯೂಟಿ ಕಮಿಷನರ್ ಉಮೇಶ ರಾಠೋಡ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಸಭಾಭರವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್.ಡಿ ಹೆರಂಜಲ ಕಲಾ ಎಸ್ ಸಕ್ರಿ ವಾಣಿಜ್ಯ ಹಾಗೂ ರಂಗರಾವ್ ದೊಡ್ಡಿಹಾಳ ವಿಜ್ಞಾನ ಪದವಿ ಪೂರ್ವ ಕಾಲೇಜಿನ ೨೦೨೩-೨೪ ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ದಿವಂತನಿಗೆ ದಾರಿದ್ರ‍್ಯ ಕಾಡಬಾರದು. ಬಡತನ ಸಾಧನೆಗೆ ಅಡ್ಡಿಯಾಯಿತು ಅನ್ನುವದು ಮೂರ್ಖತನ, ಬಡವನಾಗಿ ಹುಟ್ಟುವದು ತಪ್ಪಲ್ಲ. ಬಡವನಾಗಿ ಸಾಯುವುದು ತಪ್ಪು. ನಮ್ಮ ಹಣೆಬರಹವನ್ನು ನಾವೇ ಬದಲಾಯಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಮಾತನಾಡಿ, ಪ್ರಯತ್ನವಿಲ್ಲದೆ ಯಾವುದನ್ನು ಪಡೆಯಲು ಸಾಧ್ಯವಿಲ್ಲ. ಗುರಿ ಮುಟ್ಟುವದು ತಡವಾದೀತು ಅದಕ್ಕೆ ತಾಳ್ಮೆ ಬೇಕು. ಅಡ್ಡದಾರಿಯಲ್ಲಿ ನಡೆದರೆ ಅಡೆತಡೆಗಳು ಹೆಚ್ಚು ಶಿಸ್ತು, ಏಕಾಗ್ರತೆಯಿಂದ ರಾಜಮಾರ್ಗದಲ್ಲಿಯೇ ನಡೆಯಿರಿ. ದೈಹಿಕ ಸದೃಢತೆಯಿಂದ ಯಶಸ್ಸು ಸಾಧ್ಯ ಎಂದರು.
ವಿದ್ಯಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ, ಪ್ರಾಚಾರ್ಯ ಅಶೋಕ ಕಂದಗಲ್ಲ ಇದ್ದರು. ಆರ್.ಜೆ.ಬೊಮ್ಮಣಗಿ ಪರಿಚಯಿಸಿದರು. ಜಿ.ಬಿ.ಕುಲಕರ್ಣಿ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಟ್ಟರು. ಡಾ.ಉಮೇಶ ತಿಮ್ಮಾಪುರ ವಂದಿಸಿದರು. ಅನುಸೂಯ ಹೊಳೆಸಾಗರ ನಿರೂಪಿಸಿದರು.