ಶ್ರೀಸ್ವತಂತ್ರ ಸಿದ್ಧಲಿಂಗೇಶ್ವರರ ಅದ್ದೂರಿ ಬ್ರಹ್ಮ ರಥೋತ್ಸವ

25-KRP-1
Published on

ಕೆ.ಆರ್.ಪೇಟೆ: ತಾಲೂಕಿನ ಶರಣರ ಶ್ರದ್ಧಾ ಕೇಂದ್ರವಾದ ಕಾಪನಹಳ್ಳಿ ಗವಿಮಠದಲ್ಲಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಬ್ರಹ್ಮ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.


ಶ್ರೀರಥದಲ್ಲಿ ವಿರಾಜಮಾನವಾಗಿದ್ದ ಸ್ವತಂತ್ರ ಸಿದ್ಧಲಿಂಗೇಶ್ವರರ ಉತ್ಸವಮೂರ್ತಿಗೆ ಬೆಂಗಳೂರಿನ ಕೆಂಗೇರಿಯ ಬಂಡೆಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕಾಪನಹಳ್ಳಿ ಗವಿಮಠದ ಪೀಠಾಧಿಪತಿ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.


ರಥೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಕಾಪನಹಳ್ಳಿ ಗವಿಮಠವು ವಿವಿಧತೆಯಲ್ಲಿ ಏಕತೆಯ ಸಂದೇಶ ನೀಡುವ ಶ್ರದ್ಧಾ ಕೇಂದ್ರವಾಗಿದೆ. ಗವಿಮಠದ ವ್ಯಾಪ್ತಿಯಲ್ಲಿರುವ 9 ಗ್ರಾಮಗಳ ಜನರು ಜಾತಿ, ಮತ, ಪಂಥಗಳಿಂದ ಹೊರಬಂದು ಒಂದಾಗಿ ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ಸಮ ಸಮಾಜದ ನಿರ್ಮಾಣದ ಸಂದೇಶ ನೀಡುತ್ತಿದ್ದಾರೆ. ವಚನಗಳ ಮೂಲಕ ಸಾಮಾಜಿಕ ಸಂದೇಶ ನೀಡಿದ ಯತಿಗಳಾದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರರು ತಮ್ಮ ಕಾರ್ಯಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಪವಾಡಗಳ ಮೂಲಕ ಶ್ರೀ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಹಾದಿಯಲ್ಲಿ ಸಾಗುವ ಮೂಲಕ ಜೀವನದಲ್ಲಿ ಯಶಸ್ಸು ಮತ್ತು ಸಾಧನೆ ಮಾಡುವ ಮೂಲಕ ಬದಲಾವಣೆಯ ದಿಕ್ಕಿನತ್ತ ಸಾಗೋಣ ಎಂದು ಹೇಳಿದರು.


ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ, ಮಾಜಿ ಅಧ್ಯಕ್ಷ ತೋಟಪ್ಪಶೆಟ್ಟಿ, ದಾನಿಗಳಾದ ಬೂಕನಕೆರೆ ವಿಜಯರಾಮೇಗೌಡ, ಸಾವಿರಾರು ಜನರು ಭಾಗವಹಿಸಿದ್ದರು.
ಜಾನಪದ ಕಲಾತಂಡಗಳು ರಥೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದವು. ಸಾರ್ವಜನಿಕರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net