ಅದ್ದೂರಿಯಾಗಿ ಜರುಗಿದ ಶ್ರೀರಾಕಸಮ್ಮ ರಥೋತ್ಸವ

20240409_233114
Published on

ಮೂಗೂರು: ಯುಗಾದಿ ಹಬ್ಬದ ದಿನವಾದ ಮಂಗಳವಾರ ಮೂಗೂರು ಗ್ರಾಮದ ಶ್ರೀರಾಕಸಮ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.


ಹಬ್ಬದ ಹಿನ್ನೆಲೆಯಲ್ಲಿ ದೇಗುಲದಿಂದ ರಥ ಸಾಗುವ ದಾರಿಯನ್ನು ತಳಿರು -ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗಿನ ಜಾವ ದೇಗುಲದಲ್ಲಿ ಅಮ್ಮನವರಿಗೆ ಅಭಿಷೇಕ ವಿಶೇಷ ಪೂಜೆಗಳು ಧಾರ್ಮಿಕ ಕಾರ್ಯಗಳು ಸಾಂಗವಾಗಿ ನಡೆದವು.


ಶ್ರೀರಾಕಸಮ್ಮನ ಉತ್ಸವ ಮೂರ್ತಿಯನ್ನು ಕಾವೇರಿ, ಕಪಿಲಾ ನದಿಯ ದಡದಲ್ಲಿ ಹೋಮ ನಡೆಸಿ ಪೂಜೆ ಸಲ್ಲಿಸಲಾಯಿತು. ನಂತರ ಹೋಮದ (ತೀರ್ಥ) ನೀರಿನಲ್ಲಿ ಅಮ್ಮನವರಿಗೆ ದೇವಾಲಯದಲ್ಲಿ ಅಭಿಷೇಕ ಮಾಡಿದ ಬಳಿಕ ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಯಿತು.


ರಾತ್ರಿ 10 ಗಂಟೆ ನಂತರ ವಿಶೇಷ ಪೂಜೆಯೊಂದಿಗೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಾಕಸಮ್ಮನ ದೇವಾಲಯದ ಬಳಿ ಹಾಗೂ ಅಲ್ಲಲ್ಲಿ ಭಕ್ತರಿಂದ ಪ್ರಸಾದ ವಿನಿಯೋಗ ನಡೆಯಿತು.


ವೀರಭದ್ರೇಶ್ವರ ಸ್ವಾಮಿ ಉತ್ಸವ: ಯುಗಾದಿ ಹಬ್ಬದ ಅಂಗವಾಗಿ ವೀರಭದ್ರೇಶ್ವರ ಸ್ವಾಮಿಯ ಹುಲಿ ವಾಹನ, ಉತ್ಸವ ಬಸವನ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಗೌಡರ ಬೀದಿ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net