

ಶಿರಸಿ: ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ದಿ. ಶ್ರೀಪಾದ ಹೆಗಡೆ ಕಡವೆ ಅವರ ಕೊಡುಗೆ ಅಮೂಲ್ಯವಾದದ್ದು. ತಾಲೂಕಿನ ಶೇ. 95 ರೈತರು ಒಂದಿಲ್ಲೊಂದು ಸಹಕಾರಿ ಸಂಘಗಳೊಂದಿಗೆ ಜೋಡಿಸಿಕೊಳ್ಳುವಂತೆ ಮಾಡಿದವರು ಕಡವೆ ಅವರು ಎಂದು ಜಿಲ್ಲಾ ಕಾಂಗ್ರೆಸ್ ಪ್ರಮುಖ ಎಸ್.ಕೆ. ಭಾಗ್ವತ್ ಹೇಳಿದರು.
ನಗರದ ಟಿಆರ್ಸಿ ಸೊಸೈಟಿ ಸಭಾಂಗಣದಲ್ಲಿ ಬುಧವಾರ ಶ್ರೀಪಾದ ಹೆಗಡೆ ಕಡವೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಾಪಾರಸ್ಥರನ್ನು ಎದುರು ಹಾಕಿಕೊಂಡು ಸಹಕಾರಿ ಕ್ಷೇತ್ರಕ್ಕೆ ಪ್ರಬಲ ವ್ಯವಸ್ಥೆ ನೀಡಿದ ಮಹಾನ್ ವ್ಯಕ್ತಿ. ಸಹಕಾರ ಕ್ಷೇತ್ರವನ್ನು ಬೆಳೆಸಿರುವ ಕಡವೆಯವರ ನಾಡಿನಲ್ಲಿ ಸಹಕಾರದೊಂದಿಗೆ ನಾವಿದ್ದೇವೆ ಎನ್ನುವುದೇ ಸಂತಸದ ವಿಷಯ, ಸಹಕಾರ ವ್ಯವಸ್ಥೆ ಹಾಳಾಗಬಾರದು. ಕಡವೆಯವರ ತತ್ವ ಸಿದ್ಧಾಂತ, ಸಹಕಾರಿ ಸೇವೆಯನ್ನು ಪರಿಚಯಿಸುವುದೇ ನಮ್ಮ ಉದ್ದೇಶ ಆಗಬೇಕಿದೆ ಎಂದರು.
ಟಿಆರ್ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ, ಕಡವೆ ಮಾತನಾಡಿ, ಡಿಸೆಂಬರ್ನಲ್ಲಿ ದಿ. ಶ್ರೀಪಾದ ಹೆಗಡೆ ಕಡವೆ ಅವರ ಜನ್ಮಶತಾಬ್ಧಿ ಆಚರಿಸಲು ತೀರ್ವನಿಸಿದ್ದೇವೆ. ಇಂದು ಹೆಸರಿಗೆ ಮಾತ್ರ ಕಡವೆಯವರು ಎನ್ನುತ್ತಾರೆ. ಆದರೆ, ಅವರ ತತ್ವ, ಸಿದ್ಧಾಂತ ದೂರವಾಗಿದೆ ಎಂದು ಖೇಧ ವ್ಯಕ್ತಪಡಿಸಿದರು. ಟಿಆರ್ಸಿ ಸಿಬ್ಬಂದಿ ಜಿ.ಜಿ. ಹೆಗಡೆ ಮಾತನಾಡಿದರು.ಸಹಕಾರಿ ಪ್ರಮುಖರಾದ ಆರ್.ಎನ್. ಹೆಗಡೆ, ದೀಪಕ ಹೆಗಡೆ ದೊಡ್ಡೂರು, ಶ್ರೀಪಾದ ಹೆಗಡೆ ಕಡವೆ ಇತರರು ಉಪಸ್ಥಿತರಿದ್ದರು.
ಟಿಎಸ್ಎಸ್ನಲ್ಲಿ: ಟಿಎಸ್ಎಸ್ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದ ಶ್ರೀಪಾದ ಹೆಗಡೆ ಕಡವೆ ಅವರಿಗೆ ಸಂಸ್ಥೆಯಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಉಪಾಧ್ಯಕ್ಷ ಎಂ.ಎನ್. ಭಟ್ ತೋಟಿಮನೆ ಹಾಗೂ ನಿರ್ದೇಶಕರು, ಸಿಬ್ಬಂದಿ ಇದ್ದರು.