ದಲಿತ ನಾಯಕರಾಗಿ ಪ್ರತಿಧ್ವನಿಸಿದ ಪ್ರಸಾದ್

29HDK01
Published on

ಎಚ್.ಡಿ.ಕೋಟೆ: ಕಳಂಕ ರಹಿತ ರಾಜಕಾರಣಿಯಾಗಿ ಸುದೀರ್ಘವಾಗಿ ಐವತ್ತು ವರ್ಷಗಳು ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ ಸ್ವಾಭಿಮಾನಿ ರಾಜಕಾರಣಿ ಸಂಸದ ವಿ.ಶ್ರೀನಿವಾಸಪ್ರಸಾದ್ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟಸ್ವಾಮಿ ಬಣ್ಣಿಸಿದರು.


ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಪ್ಪತ್ತರ ದಶಕದಲ್ಲಿ ಬಿ.ಬಸಲಿಂಗಪ್ಪ ಅವರ ಬೂಸ ಚಳವಳಿ ಸಂದರ್ಭದಲ್ಲಿ ಚಳವಳಿ ಮೂಲಕ ಬಂದು ವಿದ್ಯಾರ್ಥಿ ನಾಯಕತ್ವದ ಮೂಲಕ ದಕ್ಷಿಣ ಕರ್ನಾಟಕದಲ್ಲಿ ದಲಿತ ನಾಯಕರಾಗಿ ಪ್ರತಿಧ್ವನಿಸಿದರು. ರಾಜಕಾರಣಿ ಆಗಿದ್ದರೂ ಕೂಡ ಯಾವೊಬ್ಬ ನಾಯಕರ ಜತೆ ಹೊಂದಾಣಿಕೆ ರಾಜಕಾರಣ ಮಾಡದೆ ನೇರವಾದಿಯಾಗಿ ಇದ್ದರು ಎಂದರು.


ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ, ಕಂದಾಯ ಸಚಿವರಾಗಿ ಉತ್ತಮ ಆಡಳಿತ ಕೊಡುವುದರ ಮೂಲಕ ರಾಜಕಾರಣದಲ್ಲಿ ಪ್ರಭುತ್ವ ರಾಜಕಾರಣಿ ಎಂದು ಖ್ಯಾತಿಯಾಗಿದ್ದರು. ಅಂತಹ ಮುತ್ಸದ್ಧಿ ರಾಜಕಾರಣಿಯನ್ನ ಕಳೆದುಕೊಂಡಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ. ಪ್ರಸಾದ್ ಅವರ ಆದರ್ಶಗಳನ್ನು ನಾವು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.


ವರ್ತಕರ ಸಂಘ: ಪಟ್ಟಣದ ವರ್ತಕರ ಸಂಘದವರು ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನರು ಶ್ರದ್ಧಾಂಜಲಿ ಸಲ್ಲಿಸಿದರು. ಹಲವಾರು ದಲಿತ ಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಗೌರವ ನಮನ ಸಲ್ಲಿಸಿದವು.
ಬಿಜೆಪಿ ಮಂಡಲ ಅಧ್ಯಕ್ಷ ಶಂಭೇಗೌಡ, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ, ಪ್ರಕಾಶ್, ಲೋಕೇಶ್, ಬಿಡಗಲು ರಾಜು, ಭೀಮನಹಳ್ಳಿ ಸೋಮೇಶ್, ಮೊತ್ತ ಬಸವರಾಜಪ್ಪ , ವಿವೇಕ, ನಂದೀಶ್, ಚಂದ್ರಮೌಳಿ, ಸ್ವಾಮಿ, ಟಿ.ಟಿ.ವೆಂಕಟೇಶ್, ಸೋಮಾಚಾರಿ, ಕೆಂಡಗಣ್ಣಸ್ವಾಮಿ, ಗೋಪಾಲಯ್ಯ, ಗೋವಿಂದ, ಮಹೇಶ್, ರಘು, ಲೋಕೇಶ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net