ದೇವಳದಿಂದ ಸನಾತನ ಧರ್ಮದ ರಕ್ಷಣೆ : ಯು.ಹರೀಶ ಭಟ್ ಹೇಳಿಕೆ

Kalyana
ಉಪ್ಪುಂದ ಜಿಎಸ್‌ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಶ್ರೀನಿವಾಸ-ಪದ್ಮಾವತಿ ಕಲ್ಯಾಣ ಮಹೋತ್ಸದಲ್ಲಿ ಯು.ರವೀಂದ್ರ ಪಡಿಯಾರ್ ಹಾಗೂ ವೆಂಕಟೇಶ ಶ್ಯಾನುಭಾಗ್ ದಂಪತಿ ಕನ್ಯಾದಾನ ಮಾಡಿದರು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು.ರಾಜೇಶ ಪೈ, ಪರ್ಯಾಯ ಅರ್ಚಕ ಯು.ಹರೀಶ ಭಟ್ ಹಾಗೂ ವೈದಿಕರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಇಂದು ದೇವಾಲಯಗಳು ಕೇವಲ ಶ್ರದ್ಧಾಕೇಂದ್ರವಾಗಿರದೆ, ಜೀವನ ಕೇಂದ್ರವಾಗಿ ಮಾರ್ಪಟ್ಟಿದ್ದು, ನ್ಯಾಯಾಲಯ, ವಿದ್ಯಾಲಯ, ಔಷಧಾಲಯ ಹೀಗೆ ಅನೌಪಚಾರಿಕವಾಗಿ ಮಾನವನ ಬದುಕಿನಲ್ಲಿ ಪ್ರಭಾವ ಬೀರುವುದಲ್ಲದೇ ಸನಾತನ ಧರ್ಮದ ರಕ್ಷಣೆ ಭದ್ರಕೋಟೆಯಾಗಿದೆ ಎಂದು ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಪರ್ಯಾಯ ಅರ್ಚಕ ಯು.ಹರೀಶ ಭಟ್ ಹೇಳಿದರು.

ಉಪ್ಪುಂದ ಜಿಎಸ್‌ಬಿ ಸಮಾಜದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ-ಪದ್ಮಾವತಿ ಕಲ್ಯಾಣ ಮಹೋತ್ಸವ ನೆರವೇರಿಸಿ ನಂತರ ಧಾರ್ಮಿಕ ಉಪನ್ಯಾಸ ನೀಡಿದರು.

ವಿಭಿನ್ನ ಹೆಸರುಗಳಿಂದ ಗುರುತಿಸುವ ದೇವರು ಎಲ್ಲವನ್ನೂ ಮೀರಿದ ಶಕ್ತಿ. ದೇವರ ನಾಮಸ್ಮರಣೆಯಿಂದ ಒಳಿತಾಗುತ್ತದೆ. ಜತೆಗೆ ಕಷ್ಟದಲ್ಲಿರುವವರ ಸೇವೆ, ಅನ್ಯರ ಕೇಡು ಬಯಸದಿರುವುದು, ಒಳ್ಳೆಯವರ ಸಹವಾಸ ಮಾಡುವುದೂ ಅಷ್ಟೇ ಅಗತ್ಯ. ಇದು ಎಲ್ಲ ಮಾನವರಿಗೆ ಅನ್ವಯವಾಗುವ ಸದ್ಧರ್ಮ ಪಥ. ಭಗವಂತನನ್ನು ನೆನೆದರೆ ಸಾಲದು. ಕರ್ತವ್ಯವನ್ನೂ ಮಾಡಬೇಕು ಎನ್ನುವುದು ಭಗವಂತನಿಂದ ಪ್ರಣೀತವಾದ ಭಗವದ್ಗೀತೆಯ ಸಂದೇಶ ಎಂದರು.

ವರನ ಕಡೆಯವರಾಗಿ ಯು.ರವೀಂದ್ರ ಪಡಿಯಾರ್ ಹಾಗೂ ವಧುವಿನ ಕಡೆಯವರಾಗಿ ವೆಂಕಟೇಶ ಶ್ಯಾನುಭಾಗ್ ದಂಪತಿ ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳಿಂದ ಕೂಡಿದ ವಿವಾಹ ಮಹೋತ್ಸವ ಹಾಗೂ ಕನ್ಯಾದಾನ ಮಾಡಿದರು. ನಂತರ ಶೃಂಗರಿಸಿದ ಬೆಳ್ಳಿಪಲ್ಲಕ್ಕಿಯಲ್ಲಿ ನೂತನ ವಧು-ವರನನ್ನು ಕುಳ್ಳಿರಿಸಿ ಸಾಗಿದ ದಿಬ್ಬಣ ದೇವಸ್ಥಾನಕ್ಕೆ ತರುವ ಮೂಲಕ ಮದುವೆ ಕಾರ್ಯ ಸಂಪನ್ನಗೊಂಡಿತು. ರಾತ್ರಿ ಭಜನೆ, ಅಷ್ಟಾವಧಾನ ಸೇವೆ ಬಳಿಕ ಭೂರಿಸಮಾರಾಧನೆ ನಡೆಯಿತು. ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಯು.ರಾಜೇಶ ಪೈ ಹಾಗೂ ಟ್ರಸ್ಟಿಗಳು ಉತ್ಸವದ ಉಸ್ತುವಾರಿ ವಹಿಸಿದ್ದರು. ಊರ-ಪರವೂರ ನೂರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದರು.

ಸನಾತನ ಧರ್ಮದ ಮೂಲ ತತ್ವಗಳನ್ನಾಧರಿಸಿ ಸಾರಸ್ವತರು ತಾವು ನೆಲೆಸಿದ ಸ್ಥಳಗಳಲ್ಲಿ ಸಂಘಟಿತರಾಗಿ ಹಾಗೂ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಅಲ್ಲದೆ ಇತರರ ಬೆಳವಣಿಗೆ ಜತೆಗೆ ತಾವೂ ಬೆಳೆಯಬೇಕೆನ್ನುವ ಧರ್ಮದ ತಳಹದಿಯಲ್ಲಿ ಬದುಕುತ್ತಿರುವುದರಿಂದ ಸಮಾಜದಲ್ಲಿ ಆದರ್ಶಪ್ರಾಯವಾದ ಜೀವನ ನಡೆಸುತ್ತಿದ್ದಾರೆ. ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ನಮ್ಮ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ.- ಯು.ಹರೀಶ ಭಟ್, ಪರ್ಯಾಯ ಅರ್ಚಕ, ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಉಪ್ಪುಂದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net