

ಕೋಟ: ಸಾಸ್ತಾನದ ಕಾರ್ತಿಕ್ ಎಸ್ಟೇಟ್‌ನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದಿಂದ ಶ್ರೀನಿವಾಸ ಪದ್ಮಾವತಿ ಒಳಗೊಂಡ ಮೂರ್ತಿ ವರ್ಣರಂಜಿತ ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿಕೊಂಡು ಶ್ರೀನಿವಾಸ ಕಲ್ಯಾಣ ನಡೆಯುವ ಸ್ಥಳಕ್ಕೆ ಕರೆ ತರಲಾಯಿತು.
ಸಾಲಿಗ್ರಾಮದಿಂದ ಹೊರಟ ಪುರಮೆರವಣಿಗೆಯಲ್ಲಿ ಸುಮಾರು ಹತ್ತಕ್ಕೂ ಅಧಿಕ ಕುಣಿತ ಭಜನಾ ತಂಡಗಳು, ಕೀಲು ಕುದುರೆ, ಕೋಲಾಟ ಭಜನೆ, ಚಂಡೆ ವಾದನ, ಪಂಡಾರಪುರ ಹೊಲುವ ಭಜನಾ ತಂಡ, ಸಾವಿರಾರು ಶ್ರೀನಿವಾಸ ಭಕ್ತರು ಪೂರ್ಣಕುಂಭ ಕಳಶ ಹಿಡಿದು ಮೆರವಣಿಗೆಯೂದ್ದಕ್ಕೂ ಗೋವಿಂದನ ನಾಮ ಸ್ಮರಣೆಗೈಯುವ ದೃಶ್ಯ, ಪದ್ಮಾವತಿ ಸಹಿತ ಶ್ರೀನಿವಾಸ ದೇವರ ಶೋಭಾಯಾತ್ರೆ ಗಮನ ಸೆಳೆಯಿತು. ಬೆಳಗ್ಗೆ 9ರಿಂದ ಸ್ಥಳ ಶುದ್ದಿ, ಪುಣ್ಯಾಹವಾಚನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ರಿಂದ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು.
ಸಂಜೆ 5ರಿಂದ ದೇವರ ವಿವಾಹ ಮಂಟಪ ಪ್ರವೇಶ, ಸೀಮಂತ ಪೂಜೆ, ವಿವಾಹ ಮಂಟಪಕ್ಕೆ ಶ್ರೀ ಪದ್ಮಾವತಿ ದೇ ಆಗಮನ, ಸ್ವರ್ಣಮಣಿ ಬಂಧನ, ಮುಹೂರ್ತ ನಿರೀಕ್ಷಣೆ, ಮಾಲಾಧಾರಣೆ, ಸಂಜೆ 6.30ಕ್ಕೆ ಓದಗುವ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಶ್ರೀನಿವಾಸ ದೇವರಿಗೆ ಶ್ರೀ ಪದ್ಮಾವತಿ ದೇವಿ ಕನ್ಯಾದಾನ ಶ್ರೀನಿವಾಸ ಕಲ್ಯಾಣೋತ್ಸವ ಕಂಕಣ, ಮಂಗಳಸೂತ್ರ ಸಮರ್ಪಣೆ, ವಿವಾಹ ಹೋಮ, ಮಂಗಳಾಚಾರಣೆ, ಮಹಾಪ್ರವಿಧಾನಪೂಜೆ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು.
ಮೂರು ದಿನ ನಡೆದ ಧಾರ್ಮಿಕ ವಿಧಿ ವಿಧಾನಗಳನ್ನು ವಿದ್ವಾನ್ ಡಾ.ವಿಜಯ್ ಮಂಜರ್ ಮಾರ್ಗದರ್ಶನದಲ್ಲಿ ಪ್ರಸನ್ನ ತುಂಗ ನೇತೃತ್ವದಲ್ಲಿ ನೆರವೇರಿತು. ತಿರುಪತಿ ಪದ್ಮಾವತಿ ಶ್ರೀನಿವಾಸ ವಿವಾಹವೊತ್ಸವದ ಉಸ್ತುವಾರಿಯನ್ನು ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ನೇತೃತ್ವದಲ್ಲಿ ಜರುಗಿತು. ವಿವಾಹವೊತ್ಸವ ಧಾರ್ಮಿಕ ಕೈಂಕರ್ಯದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ದಂಪತಿ, ಸಮಿತಿ ಪದಾಧಿಕಾರಿಗಳಾದ ಎಂ.ಸಿ ಚಂದ್ರಶೇಖರ್, ಪ್ರತಾಪ್ ಶೆಟ್ಟಿ, ಸುರೇಶ್ ಪೂಜಾರಿ ಮತ್ತಿತರರು ಭಾಗಿಯಾದರು.