

ಶ್ರೀರಂಗಪಟ್ಟಣ: ಅಮೆರಿಕದ ನ್ಯೂಜೆರ್ಸಿಯಲ್ಲಿ ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾರಥ್ಯದಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ಭಾನುವಾರ ಬಿಜೆಪಿ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ನ್ಯೂಜೆರ್ಸಿ ಶಾಖಾ ಮಠದ ಶ್ರೀಶೈಲನಾಥ ಸ್ವಾಮೀಜಿ ನೇತೃತ್ವದಲ್ಲಿ ತಮ್ಮ ಆತ್ಮೀಯರೊಂದಿಗೆ ತೆರಳಿದ ಅವರು, ದೇವಾಲಯ ನಿರ್ಮಾಣದ ಕಾಮಗಾರಿಗೆ ಸಂತಸ ವ್ಯಕ್ತಪಡಿಸಿ ದೈವಿಕ ಪುಣ್ಯಕಾರ್ಯಕ್ಕೆ ನೆರವಾಗುವ ಜತೆಗೆ ಇಂತಹ ಮಹತ್ಕಾರ್ಯಕ್ಕೆ ವಿದೇಶದಲ್ಲಿ ನೆಲೆಸಿ ಒಗ್ಗೂಡಿದ ಅಲ್ಲಿನ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದರು. ಇಂತಹ ಧಾರ್ಮಿಕ ಕಾರ್ಯಕ್ಕೆ ಇನ್ನಷ್ಟು ಭಾರತೀಯರು ಮುಂದಾಗಲು ಮನವಿ ಮಾಡಿದರು.
ಎಸ್.ಸಚ್ಚಿದಾನಂದ ಮಾತನಾಡಿ, ಭೈರವೈಕ್ಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವಾದದಿಂದ ಸಪ್ತ ಸಾಗರಗಳದಾಚೆಯ ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯರ, ಅದರಲ್ಲೂ ಕನ್ನಡಿಗರ ಸಂಸ್ಕೃತಿಯ ಪ್ರತೀಕವಾಗಿ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯ ತಲೆಎತ್ತಿ ನಿಲ್ಲುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಶ್ರೀಮಠದ ಧಾರ್ಮಿಕ ಕಾರ್ಯ ರಾಜ್ಯ, ದೇಶ ಮಾತ್ರಕ್ಕೆ ಸೀಮಿತವಾಗದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಸ್ತಾರಗೊಂಡಿರುವುದು ಪುಣ್ಯದ ಕಾರ್ಯ. ಶ್ರೀಮಠದ ಮಹತ್ವಪೂರ್ಣ ಕಾರ್ಯಗಳೊಂದಿಗೆ ನಾವೆಲ್ಲರೂ ಸದಾ ಜತೆಯಾಗಿ ನಿಲ್ಲೋಣ ಎಂದರು.