ವೈದ್ಯರು, ಇಂಜಿನಿಯರಿಂಗ್ ಪದವೀಧರರ ಮೇಲೆ ಸಮಾಜದ ಋಣ

Sahe
Published on

ತುಮಕೂರು: ಶ್ರೀ ಸಿದ್ದಾರ್ಥ ಅಕಾಡೆಮಿ ಅಫ್ ಹೈಯರ್ ಏಜುಕೇಷನ್(ಸಾಹೆ)ನ ಸ್ವಾಯತ್ತ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ ಬುಧವಾರ ನಡೆಯಿತು. ಸಿದ್ಧಾರ್ಥ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಎಂಬಿಬಿಎಸ್, ಎಂ.ಎಸ್., ಬಿ.ಇ., ಎಂ.ಟೆಕ್., ಡಿಪ್ಲೊಮೊ ಇನ್ ಮೆಡಿಷನ್ ವಿಷಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ 901 ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ 13 ಸಾಧಕರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ಸಾಹೆ ಘಟಿಕೋತ್ಸವ ಭಾಷಣ ಮಾಡಿದ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಚ್ಚಿದಾನಂದ ಅವರು, ವೈದ್ಯರು, ಇಂಜಿನಿಯರಿಂಗ್ ಪದವೀಧರರ ಮೇಲೆ ಸಮಾಜದ ಋಣವಿದೆ. ಅದನ್ನು ತೀರಿಸುವ ನಿಟ್ಟಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವೃತ್ತಿ ಜೀವನವನ್ನು ಮುನ್ನೆಡೆಸಿ ಕೊಂಡು ಹೋಗುವಂತೆ ಸಲಹೆಯಿತ್ತರು.

ಪೋಷಕರ ತಾಗ್ಯ, ಸ್ನೇಹಿತರ ಸಹಕಾರ, ಗುರುಗಳ ಮಾರ್ಗದರ್ಶನ ಇವುಗಳನ್ನು ಮರೆಯಬಾರದು.ಅಲ್ಲದೆ ಸಮಾಜ ನಿಮಗಾಗಿ ಮಾಡಿರುವ ಆರ್ಥಿಕ ಸಹಾಯ ಇವುಗಳನ್ನು ತೀರಿಸುವ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಿ, ಉತ್ತಮ ವೈದ್ಯರೆನಿಸಿಕೊಳ್ಳಿ. ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಬರುತ್ತಿರುವ ಸಂಖ್ಯೆ ಶೇ.2 ಮಾತ್ರ. ಅದರಲ್ಲಿಯೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಕಲಿತವರ ಮೇಲೆ ಗುರುತರ ಜವಾಬ್ದಾರಿಗಳಿವೆ. ಇದನ್ನು ಪದವಿ ಪಡೆದ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಾಹೆ ಉಪಕುಲಪತಿ ಡಾ.ಬಾಲಕೃಷ್ಣಶೆಟ್ಟಿ ಮಾತನಾಡಿ, ಒಂದು ಸಣ್ಣ ಸನಿವಾಸ ಶಿಕ್ಷಣ ಸಂಸ್ಥೆಯೊಂದಿಗೆ ಆರಂಭವಾದ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆ ಇಂದು 85 ಕಾಲೇಜು,ಎರಡು ಮೆಡಿಕಲ್, ಒಂದು ಇಂಜಿನಿಯರಿಂಗ್ ಸೇರಿದಂತೆ 100ಕ್ಕೂ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜಿನಿಂದ 4062 ವೈದ್ಯರು,17ಸಾವಿರಕ್ಕೂ ಅಧಿಕ ಇಂಜಿನಿಯ ರಿಂಗ್ ಪದವಿಧರರನ್ನು ಸಮಾಜಕ್ಕೆ ನೀಡಿದೆ.ಪ್ರಪಂಚದ ಎಲ್ಲಾ ಕಡೆ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ನೋಡಬಹುದು. ಕರೊನಾ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನಿಂದ ಕೋವಿಡ್ ಕೇರ್ ಸೆಂಟರ್ ತೆರೆದು ಚಿಕಿತ್ಸೆ ನೀಡುವ ಮೂಲಕ ಸಮಾಜಮುಖಿ ಕೆಲಸದಲ್ಲಿ ಸಂಸ್ಥೆ ತೊಡಗಿದೆ ಎಂದರು.

ಘಟಿಕೋತ್ಸವದಲ್ಲಿ ಸಿದ್ಧಾರ್ಥ ಅಕಾಡೆಮಿ ಅಫ್ ಹೈಯರ್ ಎಜುಕೇಷನ್‌ನ ಗೌರವ ಕುಲಾಧಿಪತಿ ಡಾ.ಜಿ.ಪರಮೇಶ್ವರ್, ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ಡಾ.ಜಿ.ಎಂ.ಶಿವಕುಮಾರ್ ವಿವಿಧ ವಿಭಾಗದ ಡೀನ್‌ಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net