ಸಮಾನತೆ ಪ್ರತಿಪಾದಿಸಿದ ಶಂಕರರ ತತ್ವ ಎಲ್ಲರಿಗೂ ತಿಳಿಯಬೇಕು - ನ್ಯಾ. ಎನ್. ಕುಮಾರ್

Sudhee_02_Sree_Shankara_Award_@_Babburkamme_Seva_Samithi (1)
Published on

ಬೆಂಗಳೂರು: ಅಂಬೇಡ್ಕರ್ ಸಮಾನತೆ ಪ್ರತಿಪಾದನೆ ಮಾಡುವುದಕ್ಕಿಂತ ಸಾವಿರ ವರ್ಷಗಳ ಹಿಂದೆಯೇ ಶಂಕರಾಚಾರ್ಯರು ಸಮಾನತೆಯನ್ನು ಪ್ರತಿಪಾದಿಸಿದ್ದರು. ಅವರ ತತ್ವಗಳು ಎಲ್ಲರಿಗೂ ತಿಳಿಯುವಂತಾಗಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾ. ಎನ್. ಕುಮಾರ್ ಹೇಳಿದರು.

ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ಬಬ್ಬೂರುಕಮ್ಮೆ ಸೇವಾ ಸಮಿತಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಶಂಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಂಕರಾಚಾರ್ಯರ ತತ್ವಗಳನ್ನು ಪಾಲನೆ ಮಾಡಿದ್ದರೆ ನಮಗೆ ಇಂಥ ದುಃಸ್ಥಿತಿ ಬರುತ್ತಿರಲಿಲ್ಲ. ದೇಶವೂ ಹಿಂದುಳಿಯುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಶಂಕರಾಚಾರ್ಯರು ಪ್ರತಿಪಾದಿಸಿದ ಸಮಾನತೆಯನ್ನು ಅನುಷ್ಠಾನಕ್ಕೆ ತರಬೇಕು. ಅದರ ಬಗ್ಗೆ ಜನರಿಗೆ ತಿಳಿಸಬೇಕು. ಅದರಿಂದಾಗಿ ಮುಂದಿನ ಇಪ್ಪತ್ತು ವರ್ಷಗಳ ಬಳಿಕವಾದರೂ ಸಮಾನತೆ ತಂದವರು ಯಾರು ಎಂದಾಗ ಶಂಕರಾಚಾರ್ಯರು ಎಂದು ಹೇಳುವಂತಾಗಬೇಕು ಎಂದರು.

ಶಂಕರರ ತತ್ವಗಳೇ ತಿಳಿದಿಲ್ಲ: ಆದರೆ ಬಹಳಷ್ಟು ಮಂದಿ ಅಂಬೇಡ್ಕರ್ ಇಲ್ಲದೇ ದೇಶದಲ್ಲಿ ಸಮಾನತೆ ಇರುತ್ತಿರಲಿಲ್ಲ ಎಂದು ಹೇಳುತ್ತಾರೆ. ಫ್ರೆಂಚ್ ಕ್ರಾಂತಿಯಿಂದ ಸಮಾನತೆ ಬಂತು ಎನ್ನುವವರೂ ಇದ್ದಾರೆ. ಇದಲ್ಲದೆ ಅಮೆರಿಕ, ಇಂಗ್ಲೆಂಡ್‌ನಿಂದ ಸಮಾನತೆ ತರಲಾಯಿತು ಎಂದೂ ಹೇಳುತ್ತಾರೆ. ಇವರ ಹೇಳಿಕೆಗಳ ನಡುವೆ ಶಂಕರಾಚಾರ್ಯರ ತತ್ವಗಳೇ ನಮಗೆ ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪೌರೋಹಿತ ಮಾಡುವವರಿಗೆ ಹೆಣ್ಣು ಸಿಗುತ್ತಿಲ್ಲ: ಶ್ರೀ ಶಂಕರ ಪ್ರಶಸ್ತಿ ಸ್ವೀಕರಿಸಿದ ಅಹಿತಾಗ್ನಿ ಪ್ರದೀಪ ಶರ್ಮ ಮಾತನಾಡಿ, ಪುರೋಹಿತರೇ ತಮ್ಮ ಹೆಣ್ಣುಮಕ್ಕಳನ್ನು ಪೌರೋಹಿತ್ಯ ಮಾಡುವವರಿಗೆ ಕೊಡುತ್ತಿಲ್ಲ. ಇದರಿಂದಾಗಿ ವೈದಿಕರಿಗೆ ಸಮಾಜದಲ್ಲಿ ಹಣ, ಆಶ್ರಯ ಎಲ್ಲ ದೊರೆತರೂ, ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ವೈದಿಕ ಸಮಾಜವೇ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಹಿತಾಗ್ನಿ ಪ್ರದೀಪ ಶರ್ಮ ಮತ್ತು ವೇದಬ್ರಹ್ಮ ಗಿರೀಶ್ ಜೋಯಿಸ್ ಅವರಿಗೆ ಶ್ರೀ ಶಂಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಕರ್ತ ಎಸ್. ಸೂರ್ಯಪ್ರಕಾಶ್ ಪಂಡಿತ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್, ಬಬ್ಬೂರುಕಮ್ಮೆ ಸೇವಾ ಸಮಿತಿ ಅಧ್ಯಕ್ಷ ಎ.ವಿ. ಪ್ರಸನ್ನ, ಕಾರ್ಯದರ್ಶಿ ಡಾ. ಎನ್. ಸತ್ಯಪ್ರಕಾಶ್ ಇತರರು ಇದ್ದರು.

ಕೋಟ್

ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಹೆಸರಿನಲ್ಲಿ ಬ್ರಾಹ್ಮಣ ಸಮುದಾಯದವರು ವಲಸೆ ಹೋಗುತ್ತಿದ್ದು, ಹಳ್ಳಿಗಳ್ಳಿ ಬ್ರಾಹ್ಮರಣೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಮೂಲವನ್ನೇ ಮರೆತು ಬದುಕುವುದು ಎಷ್ಟು ಸರಿ.

- ವೇದಬ್ರಹ್ಮ ಗಿರೀಶ್ ಜೋಯಿಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net