

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದಲ್ಲಿ ಶ್ರೀ ಶನಿದೇವರ ಹೋಮ ಮತ್ತು ಪ್ರತಿಷ್ಠಾಪನೆ ಮಹೋತ್ಸವವು ಶನಿವಾರ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಗ್ರಾಮದ ಶ್ರೀ ಶನೈಶ್ಚರಸ್ವಾಮಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಹೋಮ ಮತ್ತು ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಗ್ಗೆ 6 ಗಂಟೆಗೆ ಕಾವೇರಿ ನದಿ ತೀರದ ಬಳಿ ಶ್ರೀ ಶನಿದೇವರ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರಗೊಂಡ ಪಲ್ಲಕ್ಕಿಯ ಮೇಲೆ ಪ್ರತಿಷ್ಠಾಪಿಸಿ ರಾಜಾಬೀದಿಗಳಲ್ಲಿ ವೀರಗಾಸೆ, ಪೂರ್ಣಕುಂಭ ಮತ್ತು ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿ ದೇವಸ್ಥಾನ ತಲುಪಿದರು. ದೇಗುಲದಲ್ಲಿ ವಿಶೇಷ ಪೂಜೆ ಜತೆಯಲ್ಲಿ ಹೋಮ-ಹವನಗಳು ಜರುಗಿದ್ದವು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಬೇಡಿಕೊಂಡು, ಪ್ರಾರ್ಥನೆ ಸಲ್ಲಿಸಿದರು. ಎಲ್ಲ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ಶ್ರೀ ಶನಿದೇವರ ಮಹೋತ್ಸವ ಹಿನ್ನೆಲೆ ಗ್ರಾಮದ ಪ್ರಮುಖ ಬೀದಿಗಳು ಸೇರಿದಂತೆ ವೃತ್ತಗಳಲ್ಲಿ ಹಸಿರು ಮಾವಿನ ಎಲೆ, ಕೇಸರಿ ತೋರಣಗಳು ಹಾಗೂ ಬಾವುಟಗಳು ರಾರಾಜಿಸಿದವು. ಬಣ್ಣ ಬಣ್ಣದ ದೀಪಾಲಂಕಾರದೊಂದಿಗೆ ದೇವಸ್ಥಾನವು ಕಂಗೊಳಿಸುತಿತ್ತು. ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಆಗಮಿಸಿ ಪೂಜೆ ಸಲ್ಲಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ಕುಮಾರಶೆಟ್ಟಿ, ಮುಖಂಡರಾದ ಕೆ.ವಿ.ಶೇಖರ್, ಕೆ.ಎಸ್. ಮೂರ್ತಿ, ಸ್ವಾಮಿಗೌಡ, ಗೋವಿಂದೇಗೌಡ, ಸ್ವಾಮಿನಾಯಕ, ಕೆ.ಡಿ.ಮಂಜುಶೆಟ್ಟಿ, ಸಣ್ಣಪ್ಪಶೆಟ್ಟಿ, ರಾಜಶೇಖರ್, ರಂಗೇಶ್, ಪ್ರಭಾಕರಶೆಟ್ಟಿ, ಶಿವಕುಮಾರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಹಾಗೂ ಭಕ್ತರು ಇದ್ದರು.