

ಗುಂಡ್ಲುಪೇಟೆ: ಪಟ್ಟಣದ ಶ್ರೀರಾಮೇಶ್ವರ ದೇವಾಲಯದಲ್ಲಿ ಬುಧವಾರ ರಾತ್ರಿ ಮಹಾಶಿವರಾತ್ರಿ ಆಚರಣೆಗೆ ಸಿದ್ಧತೆಗಳನ್ನು ನಡೆಸಲಾಗಿದೆ. ಈಗಾಗಲೇ ದೇವಾಲಯವನ್ನು ಶುಚಿಗೊಳಿಸಿ ಸಜ್ಜುಗೊಳಿಸಲಾಗಿದೆ. ದಾನಿಗಳ ನೆರವಿನಿಂದ ಮಿನಿ ದಸರೆ ಮಾದರಿಯಲ್ಲಿ ಕಿತ್ತೂರುರಾಣಿ ಚನ್ನಮ್ಮ ರಸ್ತೆಯ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ರಾತ್ರಿಯಿಡೀ ಜಾಗರಣೆ ನಡೆಸುವ ಸಲುವಾಗಿ ಬುಧವಾರ ಸಂಜೆ 6ರಿಂದ 11 ಗಂಟೆವರೆಗೆ ಅಂಧಮಕ್ಕಳಿಂದ ದೇವರ ನಾಮಸ್ಮರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ 11ರಿಂದ 2 ಗಂಟೆವರೆಗೆ ಮೈಸೂರು ಆಕಾಶವಾಣಿ ಕಲಾವಿದರಾದ ವಿದುಷಿ ಮಹಾಲಕ್ಷ್ಮೀ, ತಬಲಾ ವಾದಕ ಇಂದೂಶೇಖರ್ ಅವರ ತಂಡದವರಿಂದ ಹರಿದಾಸ ಸಾಹಿತ್ಯ, ದಾಸವಾಣಿ, ಭಕ್ತಿಗೀತೆ ಗಾಯನ ಆಯೋಜಿಸಿದೆ. ಆದ್ದರಿಂದ ಪಟ್ಟಣ ಹಾಗೂ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೇವಾಲಯ ಅಭಿವೃದ್ಧಿ ಸಮಿತಿಯು ತನ್ನ ಪ್ರಕಟಣೆಯಲ್ಲಿ ಕೋರಿದೆ.