

ಬಂಟ್ವಾಳ: ಮಕ್ಕಳಲ್ಲಿ ಮಾತೃಭೂಮಿಯ ಕಲ್ಪನೆ ಮೂಡಿಸಬೇಕು. ಸ್ವಂತಿಕೆಯ ಶಿಕ್ಷಣವು ಮಕ್ಕಳಿಗೆ ದೊರೆಯಬೇಕು ಎನ್ನುವುದು ವಿದ್ಯಾಭಾರತಿಯ ಕಲ್ಪನೆ. ಸಾಮರಸ್ಯ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಶ್ರೀರಾಮ ವಿದ್ಯಾಕೇಂದ್ರದ ಪದವಿ ಪೂರ್ವ ವಿದ್ಯಾಲಯದಲ್ಲಿ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಜಿಲ್ಲಾ ಶೈಕ್ಷಣಿಕ ಸಹಮಿಲನದಲ್ಲಿ ಮಾತನಾಡಿದರು.
ಮಂಗಳೂರಿನ ಶಕ್ತಿ ವಿದ್ಯಾಲಯ ಅಧ್ಯಕ್ಷ ಕೆ.ಸಿ.ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವವಾದದ್ದು. ವಿದ್ಯಾರ್ಥಿಗಳನ್ನು ದೇಶದ ಶ್ರೇಷ್ಠ ಪ್ರಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಎಂದರು.
ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಲೋಕಯ್ಯ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾಭಾರತಿ ಹಮ್ಮಿಕೊಳ್ಳುವ ಶೈಕ್ಷಣಿಕ ಸಹಮಿಲನದ ವಿಶೇಷತೆಯ ಬಗ್ಗೆ ತಿಳಿಸಿದರು. ವಿದ್ಯಾಭಾರತಿ ಕರ್ನಾಟದ ಪ್ರಾಂತ ಉಪಾಧ್ಯಕ್ಷ ಶ್ರೀಪತಿ, ಸಮಗ್ರ ವಿಕಾಸ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ ಮಾತನಾಡಿ, ಶಾರೀರಿಕವಾಗಿ, ಬೌದ್ಧಿಕವಾಗಿ ದೇಶಭಕ್ತ ಸಮಾಜದ ನಿರ್ಮಾಣವಾಗಬೇಕು ಎಂದರು.
ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟ್ರಮಣರಾವ್ ಮಂಕುಡೆ ಉಪಸ್ಥಿತರಿದ್ದರು.
ಪ್ರಾಂಶುಪಾಲ ವಸಂತ ಬಲ್ಲಾಳ್ ಸ್ವಾಗತಿಸಿದರು. ವಿದ್ಯಾಭಾರತಿ ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ. ವಂದಿಸಿದರು. ಉಪನ್ಯಾಸಕಿ ಶೋಭಾ ವಿ.ಶೆಟ್ಟಿ ಮತ್ತು ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.