ಪುರುಷೋತ್ತಮ ಪೆರ್ಲ
ವರ್ಕಾಡಿ ನಂದಾರಪದವಿನಿಂದ ತಿರುವನಂತಪುರ ಹಾದುಹೋಗುವ ಮಲೆನಾಡು ಹೆದ್ದಾರಿ ಅಂಗಡಿಮೊಗರಿನಿಂದ ಬೆದ್ರಂಪಳ್ಳ ಹಾದಿಯಾಗಿ ಪೆರ್ಲ ಸನಿಹದ ಇಡಿಯಡ್ಕ ಬಂದು ಸೇರುವ ಜಂಕ್ಷನ್ ನಿರಂತರ ಅಪಘಾತದ ವಲಯವಾಗಿ ಬದಲಾಗುತ್ತಿದೆ.
ಚೆರ್ಕಳ-ಕಲ್ಲಡ್ಕ ರಸ್ತೆಗೆ ಇಡಿಯಡ್ಕದಲ್ಲಿ ಮಲೆನಾಡು ಹೆದ್ದಾರಿ ಸಂಪರ್ಕಿಸುತ್ತಿದ್ದು, ವಾಹನಗಳಿಗೆ ವೇಗ ಕಡಿತಕ್ಕೆ ಇಲ್ಲಿ ಯಾವುದೇ ವ್ಯವಸ್ಥೆ ಅಳವಡಿಸದಿರುವುದರಿಂದ ವಾಹನ ಚಾಲಕರು ಗೊಂದಲಕ್ಕೆ ಸಿಲುಕುತ್ತಾರೆ. ಬೆದ್ರಂಪಳ್ಳ ಭಾಗದಿಂದ ಚೆರ್ಕಳ-ಕಲ್ಲಡ್ಕ ರಸ್ತೆಗೆ ಸಂಪರ್ಕಿಸುವ ರಸ್ತೆ ಇಳಿಜಾರಿನಲ್ಲಿರುವುದರಿಂದ ಸಹಜವಾಗಿ ವಾಹನಗಳು ವೇಗದಲ್ಲಿರುತ್ತವೆ. ಚೆರ್ಕಳ-ಕಲ್ಲಡ್ಕ ರಸ್ತೆಯಲ್ಲಿ ಸಾಗುವ ವಾಹನಗಳೂ ಇಲ್ಲಿ ವೇಗದಿಂದ ಸಂಚಾರ ನಡೆಸುತ್ತವೆ. ಹೆದ್ದಾರಿಯಲ್ಲಿ ವೇಗ ತಡೆಗೆ ರಸ್ತೆ ಉಬ್ಬು ನಿರ್ಮಿಸುವುದನ್ನು ಪ್ರಸಕ್ತ ಕೈಬಿಡಲಾಗಿರುವುದರಿಂದ ಬದಲಿ ವ್ಯವಸ್ಥೆ ಇಲ್ಲಿ ನಡೆಸಬೇಕಾದ ಅನಿವಾರ್ಯತೆಯಿದೆ.
ಈ ಪ್ರದೇಶದಲ್ಲಿ ಬೆದ್ರಂಪಳ್ಳ ಭಾಗದಿಂದ ಮಲೆನಾಡು ಹೆದ್ದಾರಿ ಮೂಲಕ ಆಗಮಿಸುವ ಕೆಲವು ವಾಹನಗಳನ್ನು ಅತ್ಯಂತ ವೇಗವಾಗಿ ಚಲಾಯಿಸಿ, ಮುಖ್ಯ ರಸ್ತೆಗೆ ತಲುಪಿಸುತ್ತಿರುವುದರಿಂದ ಇಡಿಯಡ್ಕ ಜಂಕ್ಷನ್‌ನಲ್ಲಿ ನಿರಂತರ ಅಪಘಾತವಾಗುತ್ತಿದೆ. ತಿಂಗಳಲ್ಲಿ ಒಂದೆರಡು ಅಪಘಾತಗಳು ಇಲ್ಲಿ ಸಾಮಾನ್ಯವಾಗಿ ನಡೆಯುತ್ತಿವೆ. ಚಾಲಕರು ನಿರ್ಲಕ್ಷೃದಿಂದ ವಾಹನ ಚಲಾಯಿಸುವ ಜತೆಗೆ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯಿಂದ ಇಲ್ಲಿ ಅಪಘಾತ ಮರುಕಳಿಸುವಂತಾಗಿದೆ.
ಚೆರ್ಕಳ-ಕಲ್ಲಡ್ಕ ರಸ್ತೆಗೆ ಸಂಪರ್ಕಿಸುವ ಅಥವಾ ಈ ರಸ್ತೆಯಿಂದ ಬೆದ್ರಂಪಳ್ಳ ಭಾಗಕ್ಕೆ ತೆರಳುವ ವಾಹನಗಳ ಚಾಲಕರು ನಿರಂತರ ಗೊಂದಲಕ್ಕೊಳಗಾಗುತ್ತಾರೆ. ಇಡಿಯಡ್ಕ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿ, ಇಳಿಸಲು ಅವೈಜ್ಞಾನಿಕ ರೀತಿಯಲ್ಲಿ ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿರುವುದು ಮತ್ತೊಂದು ಸಮಸ್ಯೆಯಾಗಿದೆ. ಜಂಕ್ಷನ್‌ನಲ್ಲಿರುವ ಬಸ್ ನಿಲುಗಡೆ ವ್ಯವಸ್ಥೆ ಇಲ್ಲಿಂದ ಬದಿಯಡ್ಕ ಭಾಗಕ್ಕೆ ತೆರಳುವ ರಸ್ತೆಯಲ್ಲಿ ಅಲ್ಪ ಮುಂದಕ್ಕೆ ಸ್ಥಳಾಂತರಿಸುವಂತೆಯೂ ಚಾಲಕರು ಆಗ್ರಹಿಸಿದ್ದಾರೆ.
ಇಡಿಯಡ್ಕ ಜಂಕ್ಷನ್‌ನಲ್ಲಿ ವಾಹನಗಳ ವೇಗದ ಸಂಚಾರದಿಂದ ಅಪಘಾತ ಮರುಕಳಿಸುತ್ತಿದೆ. ಇಡಿಯಡ್ಕ ಜಂಕ್ಷನ್‌ನಲ್ಲಿ ಈ ಹಿಂದಿನಂತೆ ರಸ್ತೆ ಅಗಲಗೊಳಿಸಿ, ಏಕಮುಖ ಸಂಚಾರದ ವ್ಯವಸ್ಥೆ ಕಲ್ಪಿಸಿದಲ್ಲಿ ಅಪಘಾತ ಕಡಿಮೆ ಮಾಡಲು ಸಾಧ್ಯ.
– ಸತೀಶ್ ಕುದ್ವ,ಪಿಕ್‌ಅಪ್ ಚಾಲಕ-ಮಾಲೀಕ