

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಭಾನುವಾರ ಶ್ರೀರಾಮ ನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪಟ್ಟಣದ ಆಂಜನೇಯ ದೇವಾಲಯ ಮತ್ತು ಕುರುಹಿನ ಶೆಟ್ಟಿ ಸಮಾಜದ ಶ್ರೀ ರಾಮಮಂದಿರದಲ್ಲಿ ಬೆಳಗ್ಗಿನಿಂದ ವಿಶೇಷ ಪೂಜೆಗಳು ನಡೆದವು. ಆಂಜನೇಯ ದೇವಾಲಯದಲ್ಲಿ ಭಕ್ತರಿಗೆ ಕೋಸಂಬರಿ, ಪಾನಕ ಹಾಗು ಮಜ್ಜಿಗೆ ವಿತರಿಸಲಾಯಿತು. ಶ್ರೀ ರಾಮ ಉತ್ಸವ ಸಮಿತಿ ವತಿಯಿಂದ ಜ್ಞಾನ ವಿಕಾಸ ಶಾಲೆಯಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗು ರಾತ್ರಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀರಾಮನ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಸಂಜೆ ಹಲವೆಡೆಗಳಿಂದ ಆಗಮಿಸಿದ್ದ 8 ವಿದ್ಯುತ್ ದೀಪಗಳಿಂದ ಅಲಂಕೃತ ಮಂಟಪಗಳ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮೆರವಣಿಗೆ ಸಂದರ್ಭ ಕೊಡಗು ವಾದ್ಯ, ಮೈಸೂರು ತಮಟೆ, ನಾಸಿಕ್ ಬ್ಯಾಂಡ್, ವೀರಗಾಸೆ ನೃತ್ಯ, ಡೊಳ್ಳುಕುಣಿತ, ಕೆಂಗಿಲೆ, ವಿವಿಧ ವೇಷ ಕುಣಿತಗಳು ಮೆರವಣಿಗೆಯಲ್ಲಿ ಗಮನ ಸೆಳೆಯಿತು. ಸಾವಿರಾರು ಜನ ಶೋಭಾಯಾತ್ರೆಯನ್ನು ವೀಕ್ಷಿಸಿ ಸಂಭ್ರಮಿಸಿದರು. ಭಕ್ತರು ವಾದ್ಯದೊಂದಿಗೆ ರಸ್ತೆಯಲ್ಲಿ ಕುಣಿದು ಕುಪ್ಪಳ್ಳಿಸಿ ಸಂಭ್ರಮಿಸಿದರು. ಕಕ್ಕೆಹೊಳೆ ಸಮೀಪ ರಾವಣನ ಬೃಹತ್ ಟ್ಯಾಬ್ಲೊ ಅಕರ್ಷಣೆಯ ಕೇಂದ್ರವಾಗಿತ್ತು.
06ಎಸ್‌ಪಿಟಿ6: ಸೋಮವಾರಪೇಟೆ ಆಂಜನೇಯ ದೇವಾಲಯದ ಆವರಣದಲ್ಲಿ ರಾಮನವಮಿ ಪ್ರಯುಕ್ತ ದೇವಾಲಯಕ್ಕೆ ಆಗಮಿಸಿದವರಿಗೆ ಕೋಸಂಬರಿ ಹಾಗೂ ಪಾನಕ ವಿತರಿಸಲಾಯಿತು.