

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜೈನ ಧರ್ಮವು ಜಗತ್ತಿನ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು. ಜೈನ ಧರ್ಮದ ತತ್ವ ಸಿದ್ಧಾಂತಗಳು ವೈಜ್ಞಾನಿಕ ಹಿನ್ನೆಲೆಯಲ್ಲಿದೆ ಜೈನ ಧರ್ಮೀಯರಲ್ಲಿ ಧರ್ಮದ ಪ್ರಜ್ಞೆ ಉಳಿಸಿ ಬೆಳೆಸುವಲ್ಲಿ ಜಿನ ಚೈತ್ಯಾಲಯಗಳು ಪೂರಕ ಮತ್ತು ಪ್ರೇರಕ ಎಂದು ಶ್ರೀ ಜೈನ ಮಠ ಕಾರ್ಕಳದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಹೇಳಿದರು.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ 600 ವಷರ್ಗಳ ಇತಿಹಾಸ ಹೊಂದಿರುವ ಭ.1008 ಶ್ರೀ ಪಾರ್ಶ್ವನಾಥ ಸ್ವಾಮಿಯ ಪಾಳುಬಿದ್ದಿದ್ದ ಬಸದಿ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದರು. ನಿಡ್ವಾಳ ಬಸದಿಗೆ ಸೇರಿರುವ ಎಲ್ಲ ಊರ ಪರವೂರ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.
ವಾಸ್ತುತಜ್ಞ ಪಾದೂರು ಸುದರ್ಶನ್ ಇಂದ್ರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಈ ಸೀಮೆಯ ಜೈನ ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಮತ್ತು ಬಸದಿಗೆ ಸಂಬಂಧಪಟ್ಟ ಎಲ್ಲ ಮನೆತನಗಳು ಸೇರಿಕೊಂಡು ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಲಾಗಿದೆ.