

ಕುಮಟಾ: ತಾಲೂಕಿನ ಕತಗಾಲದ ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಮಹಾಬಲೇಶ್ವರ ಷಡಕ್ಷರಿ ಅವರಿಗೆ ಉಡುಪಿ ಅದಮಾರು ಮಠ ಹಾಗೂ ಶ್ರೀ ಕೃಷ್ಣ ಬಳಗ ನೀಡುವ ಶ್ರೀ ನರಹರಿತೀರ್ಥ ಪ್ರಶಸ್ತಿ ನೀಡಿ ಗೌರವಿಸಿದೆ.
ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಪಲಿಮಾರುಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದವರಿಗೆ ಗುರುವಂದನೆ ಸಲ್ಲಿಸಲಾಯಿತು. ಬಳಿಕ ಯಕ್ಷಗಾನ ಕ್ಷೇತ್ರದ ಅಮೂಲ್ಯ ಸಾಧನೆಗಾಗಿ ಶ್ರೀಧರ ಷಡಕ್ಷರಿ ಅವರಿಗೆ ಶ್ರೀ ನರಹರಿತೀರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಾಲ್ಯದಿಂದಲೇ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನವನ್ನು ಶಾಸ್ತ್ರೋಕ್ತವಾಗಿ ಕಲಿತು ಯಕ್ಷಕಾಶಿ ಗುಂಡಬಾಳ ಮೇಳದಲ್ಲಿ ಹತ್ತಾರು ವರ್ಷ ಸೇವೆ ಸಲ್ಲಿಸಿದರು. ಬಳಿಕ ಜಿಲ್ಲೆಯ ಕೆರೆಮನೆ ಮೇಳದಲ್ಲಿಯೂ ದಶಕಗಳ ಕಾಲ ಕಲಾ ಸೇವೆಗೈದಿದ್ದರು. ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ ಮುಂತಾದ ದಿಗ್ಗಜ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದರು. ಎಲ್ಲ ರೀತಿಯ ಪಾತ್ರಗಳನ್ನು ಮಾಡಿದರೂ ಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದರು. ಹಲವು ವರ್ಷದಿಂದ ಕಾಯಿಲೆ ಪೀಡಿತರಾಗಿ ಜೀವನೋಪಾಯಕ್ಕೆ ಕೃಷಿ ಕಾರ್ಯವನ್ನೇ ಶ್ರೀಧರ ಷಡಕ್ಷರಿ ನಂಬಿರುವಾಗ ಅವರ ಜೀವಮಾನದ ಯಕ್ಷ ಕಲಾಸೇವೆಗಾಗಿ ಪ್ರಶಸ್ತಿಗಳು ಅರಸಿ ಬರುತ್ತಿರುವುದು ಯಕ್ಷಪ್ರೇಮಿಗಳಿಗೆ ಸಂತಸ ತಂದಿದೆ.