ಭಕ್ತರನ್ನು ಕಾಯುವ ಶ್ರೀಲಕ್ಷ್ಮೀನಾರಾಯಣಸ್ವಾಮಿ

ಭಕ್ತರನ್ನು ಕಾಯುವ ಶ್ರೀಲಕ್ಷ್ಮೀನಾರಾಯಣಸ್ವಾಮಿ
Published on

ಎಂ.ಎಸ್. ರವಿಕುಮಾರ್ ಕೆ.ಆರ್.ನಗರ

ಪಟ್ಟಣ ನಿರ್ಮಾಣವಾದಾಗ ಸ್ಥಳಾಂತರಗೊಂಡು ಮೈಸೂರು ಮಹಾರಾಜರಿಂದ ನಿರ್ಮಿಸಲ್ಪಟ್ಟ ಕೊನೆಯ ದೇವಾಲಯ ಹಾಗೂ ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಭಕ್ತರನ್ನು ಕಾಯುತ್ತ ಅವರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಪಟ್ಟಣದ ಪ್ರಸಿದ್ಧ ದೇವತೆಗಳಲ್ಲಿ ಒಂದಾಗಿದೆ.

ಪಟ್ಟಣದ ಹೃದಯ ಭಾಗ ಮಹಾತ್ಮಾಗಾಂಧಿ ಉದ್ಯಾನದ ಬಳಿ ಇರುವ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇಗುಲ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ದೇವಾಲಯ ಪಟ್ಟಣದ ಹೊರ ವಲಯದ ಹಳೇ ಎಡತೊರೆಯ ಕಾವೇರಿ ನದಿ ದಡದ ಬಳಿ ಇತ್ತು ಎನ್ನಲಾಗಿದೆ. 1934 ರಲ್ಲಿ ಕೃಷ್ಣರಾಜಸಾಗರ( ಕನ್ನಾಂಬಾಡಿ) ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ನದಿ ನೀರಿನ ಹಿನ್ನೀರಿನಿಂದ ಮುಳುಗಡೆ ಆದ ಸಂದರ್ಭದಲ್ಲಿ ಅಲ್ಲಿದ್ದ ಊರು ಮತ್ತು ದೇವರನ್ನು ಕೆ.ಆರ್.ನಗರಕ್ಕೆ ಸ್ಥಳಾಂತರಿಸಿ ಸುಸಜ್ಜಿತ ಪಟ್ಟಣ ನಿರ್ಮಾಣದ ಜತೆಗೆ ಉತ್ತಮವಾದ ದೇವಸ್ಥಾನವನ್ನು ನಿರ್ಮಿಸಿ ಮೂಲ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸಿಕೊಂಡು ಬರಲಾಗುತ್ತಿದೆ. ಈ ದೇವಾಲಯ ನಿರ್ಮಾಣಗೊಂಡು 90 ವರ್ಷ ಕಳೆದಿದೆ.

ಇತಿಹಾಸ: ದೇಗುಲ ದೇಶದಲ್ಲೇ ವಿಶೇಷತೆ ಹೊಂದಿದೆ. ತಾಲೂಕಿನಲ್ಲಿ ಪಂಚನಾರಾಯಣ ಕ್ಷೇತ್ರವಿದ್ದು, ಎಡತೊರೆ ಲಕ್ಷ್ಮೀನಾರಾಯಣ, ಹಂಪಾಪುರ ಲಕ್ಷ್ಮೀನಾರಾಯಣ, ತಿಪ್ಪೂರು ಲಕ್ಷ್ಮೀನಾರಾಯಣ, ನಾರಾಯಣಪುರ ಲಕ್ಷ್ಮೀನಾರಾಯಣ, ಭೇರ್ಯ ಲಕ್ಷ್ಮೀ ನಾರಾಯಣ ಕ್ಷೇತ್ರಗಳಾಗಿವೆ. ಇದರಲ್ಲಿ ಎಡತೊರೆ ಲಕ್ಷ್ಮೀನಾರಾಯಣ ಸ್ವಾಮಿ ಕೆ.ಆರ್.ನಗರ ಪಟ್ಟಣಕ್ಕೆ 90 ವರ್ಷದ ಹಿಂದೆ ಸ್ಥಳಾಂತರಗೊಂಡಿದ್ದು, ಮೂಲದೇವರಿಗೆ ಒಂದು ಸಾವಿರ ವರ್ಷಗಳ ಇತಿಹಾಸ ಇದೆ ಎಂದು ಹೇಳಲಾಗುತ್ತದೆ.

ವಿಶೇಷ: ಅರ್ಕ ಪುಷ್ಕರಣಿ ಮಹಾತ್ಮೆ ಗ್ರಂಥದಲ್ಲಿ ತಿಳಿಸಿರುವಂತೆ, ಎಲ್ಲ ನಾರಾಯಣಸ್ವಾಮಿಯ ವಿಗ್ರಹಗಳಲ್ಲಿ ಅಭಯಹಸ್ತ ಮಾತ್ರ ಇದ್ದರೆ ಈ ದೇವಸ್ಥಾನದಲ್ಲಿರುವ ನಾರಾಯಣಸ್ವಾಮಿ ಕೈಯಲ್ಲಿ ಗುಲಗಂಜಿ ಇರುವುದು ವಿಶೇಷವಾಗಿದೆ. ಇದಕ್ಕೆ ಗುಂಜಾ ಲಕ್ಷ್ಮೀನಾರಾಯಣಸ್ವಾಮಿ ಎಂದು ಕೂಡ ಕರೆಯಲಾಗುತ್ತಿದ್ದು, ಭಾರತ ದೇಶದಲ್ಲಿಯೇ ಇದೊಂದೇ ವಿಗ್ರಹ ಮಾತ್ರ ಈ ರೀತಿಯ ವಿಶಿಷ್ಠತೆಯನ್ನು ಹೊಂದಿರುವುದಾಗಿದೆ. ವರ್ಷದ ಎಂಟು ತಿಂಗಳು ದೇವರು ನೆಲೆಯಾಗಿದ್ದು, ನಂತರದ ಚಾತುರ್ಮಾಸ್ಯದ ಸಂದರ್ಭ ನಾಲ್ಕು ತಿಂಗಳು ವಿಶ್ವ ಪರ್ಯಟನೆ ಮಾಡುತ್ತದೆ. ಈ ಸ್ವಾಮಿ ನೆಲೆ ನಿಂತಿರುವ ಈ ಊರಿನಲ್ಲಿ ಜನ್ಮತಾಳಿದವರಿಗೆ ಮರುಜನ್ಮ ಪ್ರಾಪ್ತಿಯಾಗುವುದಿಲ್ಲವಂತೆ. ಕಾರಣ ಅವರಿಗೆ ಸ್ವರ್ಗ ಪ್ರಾಪ್ತಿಯಾಗಿ ಆತ್ಮಕ್ಕೆ ಮೋಕ್ಷ ಸಿಗಲಿದೆ ಎಂಬುದು ಪ್ರತೀತಿ. ನಂಬಿಕೆ ಇದೆ.

ದೇಗುಲ ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆಯಾಗಿದ್ದು, ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆಗಳು ನಡೆಯುತ್ತವೆ. ಹಬ್ಬ ಹರಿದಿನಗಳಲ್ಲಿ, ನವರಾತ್ರಿಯಂದು ಪಟ್ಟಣದಾದ್ಯಂತ ಉತ್ಸವ ಮೂರ್ತಿಯ ಮೆರವಣಿಗೆ, ತುಳಸಿ ಹಬ್ಬ, ವೈಕುಂಠ ಏಕಾದಶಿ, ವಿಶ್ವದೀಪ, ರಾಮನವಮಿಗಳಲ್ಲಿ ವಿಶೇಷವಾದ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಅಲ್ಲದೆ ವೈಕುಂಠ ಏಕಾದಶಿಯಂದು ಈ ದೇವಾಲಯದಲ್ಲಿ ಮುಂಜಾನೆಯಿಂದ ರಾತ್ರಿವರೆಗೂ ಕಿಮೀಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರು ಲಕ್ಷ್ಮೀನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸಿ ಸ್ವರ್ಗದ ಬಾಗಿಲ ಮೂಲಕ ತೆರಳಿ ತಮ್ಮ ಭಕ್ತಿ ಭಾವ ಮೆರೆದು ಪುನೀತರಾಗುತ್ತಾರೆ.

ಈ ದೇವಸ್ಥಾನವು ಗರ್ಭಗುಡಿಯಲ್ಲಿ ಶ್ರೀ ನಾರಾಯಣಸ್ವಾಮಿ ಎಡಬದಿಯಲ್ಲಿ ಲಕ್ಷ್ಮೀದೇವಿ, ಬಲಬದಿಯಲ್ಲಿ ಚುಂಚನಕಟ್ಟೆ ಶ್ರೀರಾಮದೇವರ ಉತ್ಸವಮೂರ್ತಿಯನ್ನು ಇರಿಸುವ ಗುಡಿ ಇದ್ದು ಮುಂಭಾಗದಲ್ಲಿ ಕಂಬದಲ್ಲಿ ನರಸಿಂಹಸ್ವಾಮಿಯ ವಿಗ್ರಹವನ್ನು ಕೆತ್ತಲಾಗಿದ್ದು ಆ ವಿಗ್ರಹಕ್ಕೆ ನಿವೇಶನ ತೆಗೆದುಕೊಳ್ಳಬೇಕೆನ್ನುವವರು, ಮನೆ ಕಟ್ಟಿಕೊಳ್ಳಬೇಕು ಎನ್ನುವವರು ಬೇಡಿಕೊಂಡು ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿದರೆ ಬೇಡಿಕೆ ಶೀಘ್ರವಾಗಿ ಈಡೇರುತ್ತದೆ ಎಂಬೂದು ಪ್ರತೀತಿ.

ದೇವಾಲಯದ ಆವರಣದ ದ್ವಾರದ ಪಕ್ಕದಲ್ಲಿ ಆಂಜನೇಯಸ್ವಾಮಿ, ಶ್ರೀನಿವಾಸ ದೇವರ ಮೂರ್ತಿಗಳಿವೆ. ಈ ದೇವಾಲಯವನ್ನು ಬೃಹತ್ ಜಗುಲಿಯ ಮೇಲೆ ನಿರ್ಮಿಸಲಾಗಿದೆ. ಗರ್ಭಗುಡಿ, ಸುಖನಾಸಿಕ, ಅಲಂಕಾರ ಮಂಟಪ ಹೊಂದಿದ್ದು, ಯಾವ ಶೈಲಿಯಲ್ಲಿ ನಿರ್ಮಾಣವಾಗಿದೆ ಎಂಬುದು ಮೈಸೂರು ಅರಸರು ಹೊರತಂದಿರುವ ಕೆಲವು ಪುಸ್ತಕಗಳಲ್ಲಿ ಹೊರತುಪಡಿಸಿದರೆ ಮತ್ತೆಲ್ಲೂ ಕಾಣಸಿಗುವುದಿಲ್ಲ. ಆದ್ದರಿಂದ ಇಲ್ಲಿಯವರೆಗೆ ಇದರ ಬಗ್ಗೆ ಯಾರಿಗೂ ಸಂಪೂರ್ಣ ಮಾಹಿತಿ ಇಲ್ಲ.

ಈ ದೇವಸ್ಥಾನ ನಿರ್ಮಾಣ ಆದಾಗಿನಿಂದ ವಾಲ್ಮೀಕಿ, ರಂಗಯ್ಯ, ಗೋಪಾಲಕೃಷ್ಣ ಅಯ್ಯಂಗಾರ್ ಅವರು ಅರ್ಚಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಎಂ.ಪಿ.ಶ್ರೀನಿವಾಸ್ ಪ್ರಸಾದ್ ಅವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲು ಹೆಚ್ಚಿನ ಭಕ್ತರನ್ನು ಹೊಂದಿದ್ದ ಈ ದೇವಾಲಯ ನಂತರದ ದಿನಗಳಲ್ಲಿ ನಿರ್ಲಕ್ಷೃಕ್ಕೆ ಒಳಗಾಗಿ ಭಕ್ತರಿಲ್ಲದೆ ಭಣಗುಡುತ್ತಿತ್ತು, ನಂತರದ ದಿನಗಳಲ್ಲಿ ಮತ್ತೆ ಹೆಚ್ಚಿನ ಭಕ್ತರನ್ನು ಆಕರ್ಷಿಸುವ ಮೂಲಕ ತನ್ನ ಪವಾಡ ಮಹಾತ್ಮೆಯಿಂದ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net