

ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಆಶ್ರಯದಲ್ಲಿ 20ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ, ಎರಡನೇ ವರ್ಷದ ಅಟ್ಟಿ ಮಡಕೆ ಉತ್ಸವವು ವೈಭವದಿಂದ ಸಂಪನ್ನವಾಯಿತು. ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯಿಸ ಮಡಕೆ ಒಡೆಯುವ ಮೂಲಕ ಉದ್ಘಾಟಿಸಿದರು.
ಸುಬ್ರಹ್ಮಣ್ಯ ಬೈಪಾಸ್ ರಸ್ತೆ ಮತ್ತು ಸವಾರಿ ಮಂಟಪದ ವೃತ್ತ ಸೇರಿದಂತೆ 11 ಕಡೆ ಕಟ್ಟಿದ್ದ ಅಟ್ಟಿ ಮಡಕೆಗಳನ್ನು ಭಾಗವಹಿಸಿದ್ದ 11 ತಂಡಗಳ ಸದಸ್ಯರು ಪಿರಮಿಡ್ ರಚಿಸಿ ಜಿದ್ದಾಜಿದ್ದಿನಿಂದ ಒಡೆದರು. ಮಡಕೆ ಒಡೆದ ಸಮಯಕ್ಕನುಗುಣವಾಗಿ ವಿಜೇತ ತಂಡವನ್ನು ಆಯ್ಕೆ ಮಾಡಲಾಯಿತು. ಯುವ ತಂಡಗಳ ಉತ್ಸಾಹಕ್ಕೆ ರಾಜೇಶ್ ಎನ್.ಎಸ್ ಅವರ ಬೆಳಕಿನ ವಿನ್ಯಾಸ ಮತ್ತು ಸಂಗೀತ ಪೂರಕವಾಯಿತು. ಮಳೆಯ ನಡುವೆ ಉತ್ಸಾಹದಿಂದ ತಂಡದ ಸದಸ್ಯರು ಮಡಕೆಗಳನ್ನು ಒಡೆದರು.
ಸಮಿತಿ ಅಧ್ಯಕ್ಷ ದೀಪಕ್ ಎಚ್.ಬಿ, ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್, ಸಂಚಾಲಕರಾದ ರಾಜೇಶ್ ಎನ್.ಎಸ್, ಲೋಕೇಶ್ ಬಿ.ಎನ್, ಕಾರ್ಯದರ್ಶಿ ಸುಕೇಶ್ ಸುಧಿ, ಕೋಶಾಧಿಕಾರಿ ಉದಯಕುಮಾರ್ ನೂಚಿಲ ಮೊದಲಾದವರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಲಕ್ಷ್ಮೀ ಜನಾರ್ದನ ಯುವಕ ಮಂಡಲ ಕೇಪು ಪಡೆದುಕೊಂಡಿತು. ಸಿದ್ಧಿ ವಿನಾಯಕ ದೊಡ್ಡಕೊಪ್ಪ ಕಡಬ ದ್ವಿತೀಯ, ಶಾಸ್ತಾವು ಯುವಕ ಮಂಡಲ ರೆಂಜಾಳ ತೃತೀಯ ಮತ್ತು ಫ್ರೆಂಡ್ಸ್ ಹರಿಹರಪಲ್ಲತ್ತಡ್ಕ ಚತುರ್ಥ ಸ್ಥಾನ ಪಡೆಯಿತು. ವಿಜೇತರಿಗೆ ನಗದು ಮತ್ತು ಶಾಶ್ವತ ಫಲಕ ವಿತರಿಸಲಾಯಿತು.