

ಮುಂಡರಗಿ: ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಬುಧವಾರ ಶ್ರೀ ಕೃಷ್ಣನ ತೊಟ್ಟಿಲೋತ್ಸವ ಸೇರಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾಯಿಬಾಬಾರ ಮೂರ್ತಿಗೆ ಮಂಗಲ ಸ್ನಾನ, ಕಾಕಡಾರತಿ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ಅಲಂಕಾರ, ಶ್ರೀ ಕೃಷ್ಣನ ತೊಟ್ಟಿಲೋತ್ಸವ, ಭಜನೆ ಮಹಾಮಂಗಳಾರತಿ ಮೊದಲಾದ ಪೂಜಾ ಕೈಂಕರ್ಯಗಳು ಜರುಗಿದವು.
ವೈದ್ಯ ಡಾ. ಐ.ಎಸ್. ಸರ್ವೀ ಕುಟುಂಬದವರು ತುಲಭಾರ ಸೇವೆ ಸಲ್ಲಿಸಿದರು. ವಿಶ್ವನಾಥ ಭಟ್ ಜೋಶಿ ಹಾಗೂ ಅರ್ಚಕ ಜಯಣ್ಣ ಪಾಶಿ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ಶ್ವೇತಾ ಭಜಂತ್ರಿ ಭಕ್ತಿ ಗೀತೆ ಹಾಡಿದರು.
ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸಾಯಿಬಾಬಾ ದರ್ಶನ ಪಡೆದುಕೊಂಡು ಸಾಯಿಬಾಬಾ ಕೃಪೆಗೆ ಪಾತ್ರರಾದರು. ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಸುಮಾ ಕುಂಬಾರ, ಸುಮಂಗಳಾ ಸರ್ವೀ, ಸಂಚನಾ ಕಪಟಕರ್, ಭುವನೇಶ್ವರಿ ಕರವೀರಮಠ, ರೂಪಾಬಾಯಿ ಬೋಸ್ಲೆ, ಮಂಜುಳಾ ಸಜ್ಜನರ, ಉಮಾ ಜಾಗಟಗೇರಿ, ನಾಗರಾಜ ಕುಂಬಾರ, ಹೇಮಾ ಬಿ., ಗೀತಾ, ಇತರರು ಇದ್ದರು.