

ಬೆಂಗಳೂರು: ನಗರದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಇಸ್ಕಾನ್, ಗೋವರ್ಧನ ಗಿರಿ ಸೇರಿ ವಿಷ್ಣುವಿನ ದೇವಾಲಯಗಳಲ್ಲಿ ಹಾಗೂ ಶ್ರೀಕೃಷ್ಣ ಮಠಗಳಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಗ್ಗೆಯಿಂದಲೇ ಭಕ್ತರು ಸರತಿಯಲ್ಲಿ ಸಾಗಿ ದೇವರ ದರ್ಶನ ಪಡೆದರು.
ಕೆಲವರು ತಮ್ಮ ಮನೆಗಳಲ್ಲಿ ಕೃಷ್ಣನ ಹೆಜ್ಜೆ ಗುರುತುಗಳನ್ನು ಬರೆದು, ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದು ವಿಶೇಷವಾಗಿತ್ತು. ವಿಧವಿಧವಾದ ಖಾದ್ಯಗಳನ್ನು ಮಾಡಿ ಬೆಣ್ಣೆಸಹಿತ ನೈವೇದ್ಯ ಅರ್ಪಿಸಲಾಯಿತು. ಮನೆಯಲ್ಲಿನ ಪುಟ್ಟ ಮಕ್ಕಳಿಗೆ ಕೃಷ್ಣ ವೇಷ ಹಾಗೂ ಹೆಣ್ಣುಮಕ್ಕಳಿಗೆ ರಾಧೆಯ ಅಲಂಕಾರ ಮಾಡಿ ಅರತಿ ಬೆಳಗಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು. ಕೆಲ ಶಾಲೆಗಳಲ್ಲಿ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಿ ಪುಟ್ಟ ಮಕ್ಕಳಿಗೆ ಕೃಷ್ಣ-ರಾಧೆಯರ ಉಡುಪು ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಇಸ್ಕಾನ್‌ನಲ್ಲಿ ಶ್ರೀಕೃಷ್ಣ ವೈಭವ: ಶ್ರಾವಣ ಮಾಸದ ಅಷ್ಟಮಿ ಶ್ರೀ ಕೃಷ್ಣನ ಜನ್ಮದಿನವನ್ನು ಬೆಂಗಳೂರಿನ ಇಸ್ಕಾನ್ ಹರೇ ಕೃಷ್ಣ ಗಿರಿ, ವೈಕುಂಠ ಗಿರಿ ಮತ್ತು ವೈಟ್‌ಫೀಲ್ಡ್‌ನ ಟಿಪಿಒ (ಕರ್ನಾಟಕ ವಾಣಿಜ್ಯ ಪ್ರಚಾರ ಸಂಸ್ಥೆ)ನಲ್ಲಿ ಸಡಗರದಿಂದ ಆಚರಿಸಲಾಯಿತು. ಶ್ರೀ ಕೃಷ್ಣ ಬಲರಾಮರಿಗೆ ಅಭಿಷೇಕ ಸೇವೆ, ಆರತಿ, ಛಪ್ಪನ್ನ ಭೋಗ, ಪುಷ್ಪಾಂಜಲಿ ಸೇವೆ, ಪಲ್ಲಕ್ಕಿ ಸೇವೆ ಮತ್ತು ಉಯ್ಯಲೆ ಸೇವೆ ಹಾಗೂ 108 ಭಕ್ಷ್ಯಗಳ ವಿಶೇಷ ನೈವೇದ್ಯವನ್ನು ಮಾಡಲಾಯಿತು. ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಶೋಭಾ ಕರಂದ್ಲಾಜೆ, ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ನಟ ವಿಜಯ ರಾಘವೇಂದ್ರ ಸೇರಿ ಹಲವಾರು ಗಣ್ಯರು ಇಸ್ಕಾನ್‌ಗೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.