

ಬೆಂಗಳೂರು: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಶ್ರೀಗುರು ಚರಂತಪ್ಪಜ್ಜ ಸ್ವಾಮೀಜಿ 20ನೇ ಪುಣ್ಯ ಸ್ಮರಣೋತ್ಸವವನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಭಾನುವಾರ (ಏ. 7) ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಶ್ರೀ ಗುರುದೊಡ್ಡ ಬಸವೇಶ್ವರ ಸೇವಾ ಸಮಿತಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶಿವಗಂಗೆ ಮೇಲಣ ಗವಿಮಠದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿಯ ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಕೊಂಚೂರು ಸವಿತಾ ಪೀಠದ ಶ್ರೀ ಸವಿತಾನಂದನಾಥ ಸ್ವಾಮೀಜಿ, ಬೆಣ್ಣಿಹಳ್ಳಿ ಹಿರೇಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಗದ್ದಿಕೆರೆ ಹಿರೇಮಠದ ಶ್ರೀ ಅಭಿನವ ಚರಂತೇಶ್ವರ ಸ್ವಾಮೀಜಿ, ಆಂಧ್ರದ ಜಂಗಮರ ಹೊಸಹಳ್ಳಿಯ ಶ್ರೀ ಅಜಾತ ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಸಾಹಿತಿ ಎಸ್. ವಿ. ಪಾಟೀಲ ಗುಂಡೂರು ರಚಿಸಿದ 551ನೇ ಕೃತಿ ‘ನಡೆದಾಡುವ ದೇವರು ಭಾಗ-2’ ಮತ್ತು ‘ಬಾಲ ಚರಂತೇಶ್ವರ’ (ಭಕ್ತಿ ಪ್ರಧಾನ ನಾಟಕ) ಕೃತಿಗಳನ್ನು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಕೆ.ಎಂ. ಮೇತ್ರಿ ಲೋಕಾರ್ಪಣೆ ಮಾಡಲಿದ್ದಾರೆ. ಹೃದಯ ತಜ್ಞ ಡಾ.ಸಿ.ಎನ್. ಮಂಜುನಾಥ್, ತಥಾಗತ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಮಹಾಂತೇಶ ಚರಂತಿಮಠ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.