ಶ್ರೀ ಚನ್ನಿಗರಾಯಸ್ವಾಮಿ ಮೆರವಣಿಗೆ ವಿಜೃಂಭಣೆ

16 HANUR 2
Published on

ಹನೂರು: ತಾಲೂಕಿನ ಬಂಡಳ್ಳಿ ಗ್ರಾಮದ ಶ್ರೀ ಚನ್ನಿಗರಾಯಸ್ವಾಮಿ ದೇಗುಲದಲ್ಲಿ ಶನಿವಾರ ಸ್ವಾಮಿಯ ಜನ್ಮಾಷ್ಟಮಿ ಅಂಗವಾಗಿ ಗರುಡೋತ್ಸವ ಕಾರ್ಯಕ್ರಮ ಹಾಗೂ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ದೇಗುಲವನ್ನು ಮುಸುಕಿನ ಜೋಳದ ತೆನೆ, ವಿವಿಧ ಹಣ್ಣು, ಪುಷ್ಪ ಹಾಗೂ ತಳಿರು- ತೋರಣದಿಂದ ಸಿಂಗಾರ ಮಾಡಲಾಗಿತ್ತು. ಜತೆಗೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಅಶ್ವಿನಿ ನಕ್ಷತ್ರದಲ್ಲಿ ಸ್ವಾಮಿಗೆ ವಿವಿಧ ಅಭಿಷೇಕ, ಉಪವಾಸ ಹಾಗೂ ದೇವತಾ ಕಾರ್ಯ ನೆರವೇರಿಸಲಾಯಿತು. ಶನಿವಾರ ಬೆಳಗ್ಗೆ 5 ಗಂಟೆಯಿಂದ 6ರವರೆಗೆ ದೇಗುಲದಲ್ಲಿ ಶಾಂತಿ ಹೋಮ ನಡೆಸಲಾಯಿತು. ಬಳಿಕ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಪಲ್ಲಕ್ಕಿಯಲ್ಲಿ ಕೂರಿಸಿ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಈ ವೇಳೆ ಭಕ್ತರು ಗೋವಿಂದಾ, ಗೋವಿಂದಾ ಜಯಘೋಷವನ್ನು ಮೊಳಗಿಸುವುದರ ಮೂಲಕ ಭಕ್ತಿ, ಭಾವ ಮೆರೆದರು. ಯುವಕರು ವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಮೂಲಕ ಗರುಡೋತ್ಸವ ಧಾರ್ಮಿಕ ಕಾರ್ಯಕ್ರಮವು ಉತ್ಸವ ಮೂರ್ತಿಯ ಮೆರವಣಿಗೆಯ ಮೂಲಕ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನೆರವೇರಿತು.

ಹನೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ದೇಗುಲದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net